ಸುಪ್ರೀಂಕೋರ್ಟ್ ತೀರ್ಪು ಸಾಮಾಜಿಕ ನ್ಯಾಯಕ್ಕೆ ಸಿಕ್ಕ ಗೆಲುವು: ಸಂಸದ ಕಾರಜೋಳ

ಹೊಸದಿಗಂತ ವರದಿ, ಚಿತ್ರದುರ್ಗ :

ಆಂತರಿಕ ಮೀಸಲಾತಿಯನ್ನು ಎತ್ತಿ ಹಿಡಿಯುವ ಮೂಲಕ ಸುಪ್ರೀಂಕೋರ್ಟ್ ಏಳು ಸದಸ್ಯರ ಪೀಠ ನೀಡಿರುವ ತೀರ್ಪು ಸಾಮಾಜಿಕ ನ್ಯಾಯಕ್ಕೆ ಸಿಕ್ಕ ಅಭೂತಪೂರ್ವ ಗೆಲುವು ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ಸಾಮಾಜಿಕ ನ್ಯಾಯಕ್ಕೆ ನವ ಶಕ್ತಿ ಹಾಗೂ ಭಾರತೀಯ ಸಂವಿಧಾನದ ಆಶಯಕ್ಕೆ ಇನ್ನಷ್ಟೂ ಬಲ ನೀಡಿದಂತಾಗಿದೆ ಎಂದು ಹೇಳಿದ್ದಾರೆ.

ಸುಪ್ರೀಂ ಕೋರ್ಟ್ನ ಏಳು ನ್ಯಾಯಾಧೀಶರ ಪೀಠವು ಚಿನ್ನಯ್ಯ ತೀರ್ಪನ್ನು ರದ್ದುಗೊಳಿಸಿದ್ದು, ದೇವೀಂದ್ರ ಸಿಂಗ್ ಪ್ರಕರಣದ ತೀರ್ಪನ್ನು ಎತ್ತಿಹಿಡಿದಿದೆ. ಅಂದರೆ, ಭಾರತದ ಸಂವಿಧಾನವು ಎಸ್ಸಿಗಳಲ್ಲಿ ಆಂತರಿಕ ಮೀಸಲಾತಿಯನ್ನು ಅನುಮತಿಸುತ್ತದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿರುವುದು ನಿಜಕ್ಕೂ ಹೆಮ್ಮೆಪಡುವ ಸಂಗತಿ ಎಂದಿದ್ದಾರೆ.
ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಸಮರ್ಥನೀಯ ಎಂದು ಒಳಮೀಸಲಾತಿಪರ ತೀರ್ಪು ಪ್ರಕಟಿಸಿದ ಮಾನ್ಯ ಸರ್ವೋಚ್ಚ ನ್ಯಾಯಾಲಯದ ತೀರ್ಪಿನಿಂದಾಗಿ ೩೦ ವರ್ಷಗಳ ನಿರಂತರ ಹೋರಾಟಕ್ಕೆ ಜಯ ದೊರಕಿದೆ. ಈ ಕಾರ್ಯಕ್ಕೆ ಹೋರಾಟ ಕೈಗೊಂಡ ಪ್ರತಿಯೊಬ್ಬ ಹೋರಾಟಗಾರರನ್ನು ನಾನು ಈ ಸಂದರ್ಭದಲ್ಲಿ ನೆನೆಯುತ್ತೇನೆ ಎಂದು ಸಂಸದರಾದ ಗೋವಿಂದ ಕಾರಜೋಳ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!