ಹೊಸದಿಗಂತ ವರದಿ,ಮಂಗಳೂರು:
ಪಶ್ಚಿಮ ಘಟ್ಟದ ಉಳಿವಿನ ದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಧವ ಗಾಡ್ಗೀಳ್ ವರದಿಯನ್ನು ಜಾರಿಗೊಳಿಸಬೇಕು ಎಂದು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ (ಎನ್ಇಸಿಎಫ್) ಒತ್ತಾಯಿಸಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಶಿಧರ ಶೆಟ್ಟಿ, ರಸ್ತೆ ಅಗಲೀಕರಣ, ಪ್ರವಾಸೋದ್ಯಮ ಹೆಸರಿನಲ್ಲಿ ರೋಪ್ವೇ, ಸುರಂಗ ಮಾರ್ಗಗಳನ್ನು ಮಾಡುತ್ತಾ ಹೋದರೆ ಮುಂದಿನ ದಿನಗಳಲ್ಲಿ ಪಶ್ಚಿಮ ಘಟ್ಟ ದುರಂತ ಕತೆಗೆ ಸಾಕ್ಷಿಯಾಗಲಿದೆ. ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿದರು.
ಪಶ್ಚಿಮ ಘಟ್ಟ ರಕ್ಷಣೆಗಾಗಿ ಹಿಂದೆ ಅನಂತ ಕುಮಾರ್ ನೇತೃತ್ವದಲ್ಲಿ ಪಶ್ಚಿಮ ಘಟ್ಟ ರಕ್ಷಣಾ ಪಡೆ ರಚನೆ ಮಾಡುವ ಕಾರ್ಯಕ್ಕೆ ಯಡಿಯೂರಪ್ಪ ಅವರಾಗಲಿ, ಸಿದ್ದರಾಮಯ್ಯ ಅವರಾಗಲಿ ಆಸಕ್ತಿ ತೋರಿಸಿಲ್ಲ. ಜೌಗು ಪ್ರದೇಶ ಸಂರಕ್ಷಣಾ ಕಾಯಿದೆ ನಮ್ಮಲ್ಲಿಲ್ಲ. ಹಿಂದೆ ಕೃಷಿ ಭೂಮಿಯನ್ನು ಕೃಷಿಕನೇ ಖರೀದಿಸಿ ಉಳುಮೆ ಮಾಡಬೇಕಿತ್ತು. ಆದರೆ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ಒಂದು ತಿಂಗಳ ಮುಂಚಿತವಾಗಿ ಕರ್ನಾಟಕ ಭೂ ಕಂದಾಯ ಕಾಯಿದೆಗೆ ತಿದ್ದುಪಡಿ ತಂದು, ಕೃಷಿ ಭೂಮಿಯನ್ನು ಯಾರೂ ಖರೀದಿಸಬಹುದು ಎಂಬ ಅವಕಾಶ ಮಾಡಿಕೊಟ್ಟಿದ್ದಾರೆ ಇಂತಹ ತಿದ್ದುಪಡಿಯಿಂದ ಮುಂದೆ ನಮಗೆ ಹಕ್ಕಿಗಾಗಿ ಅಲೆದಾಡುವ ಪರಿಸ್ಥಿತಿ ಎದುರಾಗಬಹುದು. ಅದಕ್ಕಾಗಿ ಜೌಗು ಪ್ರದೇಶ ಸಂರಕ್ಷಣಾ ಕಾಯಿದೆ ಜಾರಿಗೊಳಿಸಬೇಕು ಮತ್ತು ಬಂಡವಾಳಶಾಹಿಗಳು, ವ್ಯಾಪಾರಿಗಳು ಖರೀದಿಸಿಟ್ಟಿರುವ ಕೃಷಿ ಭೂಮಿಯನ್ನು ಹಿಂಪಡೆದು ಕೃಷಿಕರಿಗೆ ಹಂಚಬೇಕು. ರಾಜ್ಯದ ಅರಣ್ಯ ಅಥವಾ ವನ್ಯ ಜೀವಿ ಮಂಡಳಿಗೆ ಪರಿಸರ ತಜ್ಞರು, ಪರಿಸರ ಹೋರಾಟಗಾರರನ್ನು ನೇಮಕ ಮಾಡಬೇಕು ಎಂದು ಶಶಿಧರ ಶೆಟ್ಟಿ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಪರಿಸರ ಹೋರಾಟಗಾರ ದಿನೇಶ್ ಹೊಳ್ಳ ಉಪಸ್ಥಿತರಿದ್ದರು.
ತುಂಬಾ ಒಳ್ಳೆಯ ಪ್ರಯತ್ನ. ಭೂ ರಮೆ ಚೆನ್ನಾಗಿರಲಿ. ಪ್ರಕೃತಿ ಬದುಕಿದರೆ ಮನುಷ್ಯನೂ ಬದುಕುತ್ತಾನೆ. ಮನುಷ್ಯನ ದುರಾಸೆಗೆ ಪ್ರಕೃತಿ ಬಲಿ ಆಗುತ್ತಿದೆ.