ಹೊಸದಿಗಂತ ವರದಿ,ಗದಗ:
ಪೊಲೀಸ್ ಎಂದು ಹೇಳಿಕೊಂಡು ಅಮಾಯಕರನ್ನು ದರೋಡೆ ಮಾಡಿ ಸಿಕ್ಕಿಹಾಕಿಕೊಂಡಿದ್ದ ರೌಡಿಶೀಟರ್‌ನ್ನು ಸ್ಥಳ ಮಹಜರು ಮಾಡಲು ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಲಕ್ಕುಂಡಿ-ಕಣಗಿನಹಾಳ ರಸ್ತೆ ಬಳಿ ಗುರುವಾರ ನಡೆದಿದೆ.
ರೌಡಿಶೀಟರ್ ಸಂಜಯ ಕೊಪ್ಪದ ಕಳೆದ ತಿಂಗಳು ೩ ರಂದು ಕಣಗಿನಹಾಳ ರಸ್ತೆಯಲ್ಲಿ ನಿಂತಿದ್ದ ವ್ಯಕ್ತಿಗೆ ಬೆದರಿಕೆ ಹಾಕಿ ನಾನು ಪೊಲೀಸ್ ಇಲ್ಲಿ ನೀವು ನಿಲ್ಲುವ ಹಾಗಿಲ್ಲ, ನೀನು ಕಳ್ಳನಿರಬಹುದು ಎಂದು ಅಮಾಯಕ ವ್ಯಕ್ತಿಗೆ ಹೆದರಿಸಿದ್ದಲ್ಲದೆ, ಹಲ್ಲೆ ಮಾಡಿ, ಮೈ ಮೇಲೆ ಹಾಕಿದ್ದ ೫.೮೫ ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ್ದನು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಗ್ರಾಮಾಂತರ ಪೊಲೀಸರು ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
ಅದರಂತೆ ಗುರುವಾರ ಬೆಳಗ್ಗೆ ಆರೋಪಿ ಜೊತೆಗೆ ಸ್ಥಳ ಮಹಜರಿಗೆ ಹೋಗಿದ್ದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿ ಆಗಲು ಪ್ಲಾನ್ ಮಾಡಿಕೊಂಡಿದ್ದ ರೌಡಿಶೀಟರ್ ಸಂಜಯ್ ಸ್ಥಳಕ್ಕೆ ಹೋಗುತ್ತಿದ್ದಂತೆ ಪೊಲೀಸ್ ಪ್ರಕಾಶ್ ಗಾಣಿಗೇರ ಮೇಲೆ ಕಲ್ಲೆಸೆದು ಎಸ್ಕೇಪ್ ಆಗಲು ಮುಂದಾಗಿದ್ದ.. ಈ ವೇಳೆ ಪೊಲೀಸ್ ಸಬ್ ಇನ್ಸಪೆಕ್ಟರ್ ಸಂಗಮೇಶ ಶಿವಯೋಗಿ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಗೊಂಡು ನೆಲಕ್ಕೆ ಬಿದ್ದ ರೌಡಿಶೀಟರ್ ಸಂಜಯ್ ನನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ಪ್ರಕಾಶ ಅವರ ಕಾಲು ಹಾಗೂ ಕೈಗೆ ಗಾಯಗಳಾಗಿದ್ದು, ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಡಿವೈಎಸ್‌ಪಿ ಎಂ.ಬಿ. ಸಂಕದ ಸೇರಿದಂತೆ ಹಿರಿಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಗಳು ಸಿಬ್ಬಂದಿ ಆರೋಗ್ಯ ವಿಚಾರಿಸಿದ್ದಾರೆ.
ಆರೋಪಿ ಸಂಜಯ ವಿರುದ್ಧ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ ೧೨ ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ. ಕೊಲೆ ಯತ್ನ, ದರೋಡೆ, ಸೇರಿದಂತೆ ವಿವಿಧ ಗಂಭೀರ ಪ್ರಕರಣದಲ್ಲಿ ಸಂಜಯ ಕೊಪ್ಪದ ಪೊಲೀಸರಿಗೆ ಬೇಕಾಗಿದ್ದಾನೆ.