ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೊಬೈಲ್ ಚಾರ್ಜ್ ಆದ ನಂತರ ಚಾರ್ಜರ್‌ನ್ನು ತೆಗೆದು ಬೇರೆಡೆಗೆ ಎತ್ತಿಡಿ, ಏನೂ ಅರಿಯದ ಕಂದಮ್ಮಗಳು ಸಿಕ್ಕ ವಸ್ತುಗಳನ್ನೆಲ್ಲಾ ಬಾಯಿಗೆ ಇಡುತ್ತಾರೆ, ಅಂತೆಯೇ ಕರೆಂಟ್ ಫ್ಲೋ ಇರುವ ಚಾರ್ಜರ್ ಬಾಯಿಗೆ ಹಾಕುತ್ತಾರೆ.
ಇಂಥದ್ದೇ ಒಂದು ಘಟನೆ ನಿರ್ಮಲ್ ಜಿಲ್ಲೆಯ ಕಡಂ ಮಂಡಲದ ಕೋಟ ಮಡ್ಡಿಪಡಗ ಗ್ರಾಮದಲ್ಲಿ ನಡೆದಿದೆ. ಒಂದೂವರೆ ವರ್ಷದ ಬಾಲಕಿ ದುರ್ಗಂ ಆರಾಧ್ಯ ವಿದ್ಯುತ್ ಬೋರ್ಡ್‌ಗೆ ನೇತಾಡುತ್ತಿದ್ದ ಸೆಲ್‌ಫೋನ್ ಚಾರ್ಜಿಂಗ್ ಕೇಬಲ್ ಅನ್ನು ಬಾಯಿಗೆ ಹಾಕಿಕೊಂಡಿದ್ದಾಳೆ.
ತಕ್ಷಣ ಆಘಾತಕ್ಕೊಳಗಾಗಿದ್ದಾಳೆ. ಮಗುವಿಗೆ ವಿದ್ಯುತ್ ಆಘಾತವನ್ನು ತಡೆದುಕೊಳ್ಳಲು ಸಾಧ್ಯವಾಗಿಲ್ಲ. ಅವಳನ್ನು ಖಾನಾಪುರ ಸರ್ಕಾರಿ ಆಸ್ಪತ್ರೆಗೆ ತಕ್ಷಣವೇ ಕರೆದೊಯ್ಯಲಾಗಿದೆ. ಆದರೆ ಮಗು ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ. ಇದರಿಂದ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.