ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದ ಪ್ರಸ್ತುತ ಪರಿಸ್ಥಿತಿ ಕುರಿತು ರಾಜ್ಯಸಭೆಯಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಮಾಹಿತಿ ನೀಡಿದ್ದಾರೆ.
ಭದ್ರತಾ ಸಂಸ್ಥೆಗಳ ಮುಖಂಡರೊಂದಿಗಿನ ಸಭೆಯ ನಂತರ ಪ್ರಧಾನಿ ಶೇಖ್ ಹಸೀನಾ ಅವರು ರಾಜೀನಾಮೆ ನೀಡಲು ಸ್ಪಷ್ಟವಾಗಿ ನಿರ್ಧರಿಸಿದ್ದಾರೆ. ಬಳಿಕ ಶೇಖ್ ಹಸೀನಾ ಅವರು ಅಲ್ಪಾವಧಿಗೆ ಭಾರತಕ್ಕೆ ಬರಲು ಅನುಮತಿ ಕೋರಿದರು. ನಾವು ಏಕಕಾಲದಲ್ಲಿ ಬಾಂಗ್ಲಾದೇಶದ ಅಧಿಕಾರಿಗಳಿಂದ ಫ್ಲೈಟ್ ಕ್ಲಿಯರೆನ್ಸ್ಗಾಗಿ ವಿನಂತಿಯನ್ನು ನಾವು ಸ್ವೀಕರಿಸಿದ ಬಳಿಕ ದೇಶಕ್ಕೆ ಬಂದಿದ್ದಾರೆ ಎಂದು ಸಂಸತ್ತಿಗೆ ಸಚಿವ ಜೈಶಂಕರ್ ತಿಳಿಸಿದರು.
ನಾವು ನಮ್ಮ ರಾಜತಾಂತ್ರಿಕ ಕಾರ್ಯಗಳ ಮೂಲಕ ಬಾಂಗ್ಲಾದೇಶದಲ್ಲಿರುವ ಭಾರತೀಯ ಸಮುದಾಯದೊಂದಿಗೆ ನಿಕಟ ಮತ್ತು ನಿರಂತರ ಸಂಪರ್ಕದಲ್ಲಿದ್ದೇವೆ. ಅಂದಾಜು 19,000 ಭಾರತೀಯ ನಾಗರಿಕರಿದ್ದು, ಅವರಲ್ಲಿ ಸುಮಾರು 9000 ವಿದ್ಯಾರ್ಥಿಗಳು ಇದ್ದಾರೆ. ಹೆಚ್ಚಿನ ವಿದ್ಯಾರ್ಥಿಗಳು ಜುಲೈನಲ್ಲಿ ಮರಳಿದ್ದಾರೆ ಎಂದು ತಿಳಿಸಿದರು.
ಬಾಂಗ್ಲಾದೇಶದಲ್ಲಿರುವ ಅಲ್ಪಸಂಖ್ಯಾತರನ್ನು ಗುರಿಯಾಗಿಸಲಾಗುತ್ತಿದೆ. ಅಲ್ಪಸಂಖ್ಯಾತರಿಗೆ ಸಂಬಂಧಿಸಿದಂತೆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಅಲ್ಪಸಂಖ್ಯಾತರ ರಕ್ಷಣೆ ಮತ್ತು ಯೋಗಕ್ಷೇಮವೇ ನಮ್ಮ ಮೊದಲ ಆದ್ಯತೆಯಾಗಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಪುನಃಸ್ಥಾಪಿಸುವವರೆಗೆ ಇದನ್ನು ಮುಂದುವರಿಸುತ್ತೇವೆ ಎಂದರು.
ಬಾಂಗ್ಲಾದೇಶದ ಅಧಿಕಾರಿಗಳು ಢಾಕಾದಲ್ಲಿನ ಹೈಕಮಿಷನ್ ಮತ್ತು ಚಿತ್ತಗಾಂಗ್, ರಾಜ್ಶಾಹಿ, ಖುಲ್ನಾ ಮತ್ತು ಸಿಲ್ಹೆಟ್ನಲ್ಲಿರುವ ಸಹಾಯಕ ಹೈಕಮಿಷನ್ಗಳಿಗೆ ಅಗತ್ಯವಿರುವ ಭದ್ರತೆಯನ್ನು ಒದಗಿಸಬೇಕೆಂದು ಭಾರತ ನಿರೀಕ್ಷಿಸುತ್ತದೆ. ನಮ್ಮ ಗಡಿ ಭದ್ರತಾ ಪಡೆಗಳಿಗೆ ಜಾಗರೂಕರಾಗಿರಲು ಸೂಚಿಸಲಾಗಿದೆ. ಕಳೆದ 24 ಗಂಟೆಗಳಿಂದ ಢಾಕಾದಲ್ಲಿನ ಅಧಿಕಾರಿಗಳೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದೇವೆ ಎಂದು ಅವರು ಹೇಳಿದರು.
ಬಾಂಗ್ಲಾಗೆ ಸಂಬಂಧಿಸಿದ ಸೂಕ್ಷ್ಮ ವಿಷಯಗಳಿಗೆ ಸಂಬಂಧಿಸಿದಂಥೆ ಸದನದ ತಿಳುವಳಿಕೆ ಮತ್ತು ಬೆಂಬಲವನ್ನು ಕೋರುತ್ತೇನೆ ಎಂದು ಸಚಿವರು ಸಂಸತ್ತಿನಲ್ಲಿ ಹೇಳಿದರು