ಹೊಸದಿಗಂತ ವರದಿ, ಮಂಗಳೂರು:
ಕನ್ನಡ ಚಲನಚಿತ್ರದ ನಟ ರಾಕಿಂಗ್ ಸ್ಟಾರ್ ಯಶ್ ಕುಟುಂಬ ಸಮೇತರಾಗಿ ಮಂಗಳವಾರ ಸಂಜೆ ನಾಗಾರಾಧನೆಯ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದರು.
ಯಶ್ ಅವರೊಂದಿಗೆ ಪತ್ನಿ ನಟಿ ರಾಧಿಕಾ ಪಂಡಿತ್, ಮಕ್ಕಳಾದ ಐರಾ ಮತ್ತು ಯಥರ್ವ್ ಆಗಮಿಸಿದ್ದರು. ಈ ಸಂದರ್ಭ ನಿರ್ದೇಶಕ ವೆಂಕಟ್ ಸಾಥ್ ನೀಡಿದ್ದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿ ಶ್ರೀ ದೇವರ ದರುಶನ ಮಾಡಿದರು. ಇವರಿಗೆ ದೇವಳದ ಅರ್ಚಕ ರಾಜೇಶ್ ನಡ್ಯಂತಿಲ್ಲಾಯ ಶಾಲು ಹೊದಿಸಿ ಮಹಾಪ್ರಸಾದ ನೀಡಿ ಹರಸಿದರು.
ಸಾಂಪ್ರದಾಯಿಕ ಉಡುಗೆಯಲ್ಲಿ ಆಗಮಿಸಿದ ಯಶ್ ಅವರು ನಟಿಸುತ್ತಿರುವ ಮುಂದಿನ ಸಿನಿಮಾ ಟಾಕ್ಸಿಕ್‌ನ ಶೂಟಿಂಗ್ ಆರಂಭಕ್ಕೆ ಮುನ್ನ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ಶ್ರೀ ದೇವರ ದರುಶನ ಪಡೆದು ಚಿತ್ರದ ಯಶಸ್ಸಿಗೆ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಹೊಸಳಿಗಮ್ಮನ ದರುಶನ ಪಡೆದು ಕುಂಕುಮಾರ್ಚನೆಯ ಪ್ರಸಾದ ಸ್ವೀಕರಿಸಿದರು.
ಶ್ರೀ ಕ್ಷೇತ್ರಕ್ಕೆ ಆಗಮಿಸಿದ ಯಶ್ ಅವರನ್ನು ಶ್ರೀ ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಶಿಷ್ಟಾಚಾರ ಅಧಿಕಾರಿ ಜಯರಾಮ ರಾವ್, ಶಿಷ್ಟಾಚಾರ ವಿಭಾಗದ ಪ್ರಮೋದ್ ಕುಮಾರ್ ಎಸ್., ಹರೀಶ್ ಕೇನ್ಯ ಸ್ವಾಗತಿಸಿದರು.
ಅಭಿಮಾನಿಗಳಿಂದ ಸೆಲ್ಪಿ
ಕುಕ್ಕೆ ದೇವಳಕ್ಕೆ ಆಗಮಿಸಿದ ಯಶ್ ಅವರನ್ನು ಕಂಡು ಅಭಿಮಾನಿಗಳು ಹರ್ಷೋದ್ಘಾರ ಮಾಡಿದರು. ಅಲ್ಲದೆ ಅವರೊಂದಿಗೆ ಫೊಟೋ ಕ್ಲಿಕ್ಕಿಸಿಕೊಳ್ಳಲು ಮುಗಿ ಬಿದ್ದರು. ಯಶ್ ಅವರು ಅಭಿಮಾನಿಗಳಿಗೆ ನಿರಾಸೆ ಮಾಡದೆ ಅವರೊಂದಿಗೆ ಸೆಲ್ಪಿ ಕ್ಲಿಕ್ಕಿಸಿಕೊಂಡರು.