ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ 7 ವರ್ಷಗಳಿಂದ ‘ಬಿಗ್ ಬಾಸ್ ತಮಿಳು’ ರಿಯಾಲಿಟಿ ಶೋ ನಿರೂಪಣೆ ಮಾಡುತ್ತಾ ಬಂದಿರುವ ನಟ ಕಮಲ್ ಹಾಸನ್ ಅಭಿಮಾನಿಗಳಿಗೆ ಒಂದು ಬ್ಯಾಡ್ ನ್ಯೂಸ್ ನೀಡಿದ್ದಾರೆ.
ಅದೇನೆಂದ್ರೆ ಈ ಬಾರಿ ತಾವು ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಿಕೊಡುವುದಿಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ. ತಮ್ಮ ಈ ನಿರ್ಧಾರಕ್ಕೆ ಕಾರಣ ಏನು ಎಂಬುದನ್ನು ಕೂಡ ಕಮಲ್ ಹಾಸನ್ ವಿವರಿಸಿದ್ದಾರೆ.
ಬಿಗ್ ಬಾಸ್ ನಿರೂಪಕರ ಬದಲಾವಣೆ ಕುರಿತು ಅಂತೆ-ಕಂತೆಗಳು ಕೇಳಿಬರುವುದು ಸಹಜ. ಆದರೆ ಈಗ ಕಮಲ್ ಹಾಸನ್ ಬಗ್ಗೆ ಕೇಳಿಬಂದಿರುವ ವಿಷಯ ಗಾಸಿಪ್ ಅಲ್ಲ. ಸ್ವತಃ ಕಮಲ್ ಹಾಸನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಈ ವಿಷಯ ತಿಳಿಸಿದ್ದಾರೆ.
‘7 ವರ್ಷಗಳ ಹಿಂದೆ ಶುರುವಾದ ನಮ್ಮ ಬಿಗ್ ಬಾಸ್ ಪಯಣಕ್ಕೆ ಬ್ರೇಕ್ ನೀಡಲು ನಿರ್ಧರಿಸಿದ್ದೇನೆ ಎಂದು ಭಾರವಾದ ಹೃದಯದಿಂದ ನಿಮಗೆ ತಿಳಿಸುತ್ತಿದ್ದೇನೆ. ಈ ಮೊದಲೇ ಒಪ್ಪಿಕೊಂಡ ಸಿನಿಮಾಗಳ ಕೆಲಸದ ಕಾರಣದಿಂದ ನನಗೆ ಈ ಬಾರಿಯ ಬಿಗ್ ಬಾಸ್ ಶೋ ನಿರೂಪಣೆ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ಕಮಲ್ ಹಾಸನ್ ಹೇಳಿದ್ದಾರೆ.
‘ನಿಮ್ಮ ಮನೆಗಳನ್ನು ತಲುಪುವ ಅವಕಾಶ ನನಗೆ ಸಿಕ್ಕಿತ್ತು. ನೀವು ನನಗೆ ಪ್ರೀತಿ ನೀಡಿದ್ದೀರಿ. ಅದಕ್ಕಾಗಿ ನಾನು ಚಿರಋಣಿ. ನಿಮ್ಮ ಬೆಂಬಲದಿಂದಾಗಿ ಬಿಗ್ ಬಾಸ್ ತಮಿಳು ರಿಯಾಲಿಟಿ ಶೋ ನನ್ನ ಪಾಲಿನ ಬೆಸ್ಟ್ ಶೋ ಆಯಿತು. ಕಲಿಕೆಯ ಅನುಭವ ನೀಡಿದ ಈ ಕಾರ್ಯಕ್ರಮಕ್ಕಾಗಿ ನಾನು ಋಣಿ ಆಗಿದ್ದೇನೆ. ನಿಮ್ಮೆಲ್ಲರಿಗೆ ಹಾಗೂ ಸ್ಪರ್ಧಿಗಳಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ’ ಎಂದು ಪತ್ರದಲ್ಲಿ ಬರೆದಿದ್ದಾರೆ ಕಮಲ್ ಹಾಸನ್.
ಹೊಸ ಸೀಸನ್ಗೆ ಯಾರು ನಿರೂಪಣೆ ಮಾಡುತ್ತಾರೆ ಎಂಬ ಮಾಹಿತಿಯನ್ನು ವಾಹಿನಿಯವರು ಇನ್ನಷ್ಟೇ ನೀಡಬೇಕಿದೆ.