ದಿಗಂತ ವರದಿ ಬೆಳಗಾವಿ:
ತಾಲೂಕಿನ ನಾವಗೆ ಗ್ರಾಮದ ಹೊರವಲಯದಲ್ಲಿರುವ ಸ್ನೇಹಂ ಅಂತಾರಾಷ್ಟ್ರೀಯ ಇನ್ಸುಲಿನ್ ಟೇಪ್ ಉತ್ಪಾದನಾ ಕಾರ್ಖಾನೆಯಲ್ಲಿ ಕಳೆದ ಮಂಗಳವಾರ ರಾತ್ರಿ ಸಂಭವಿಸಿದ ಅಗ್ನಿ ದುರಂತದಲ್ಲಿ ಯುವಕನೋರ್ವ ಸುಟ್ಟು ಕರಕಲಾಗಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ.
ಮಾರ್ಕಂಡೇಯ ನಗರದ ಯಲಪ್ಪ(20) ಕಾರ್ಖಾನೆಯ ಲಿಫ್ಟ್ ನಲ್ಲಿ ಸಿಲುಕಿ ಮೃತಪಟ್ಟಿದ್ದು, ಬೆಳಗಾವಿ ತಾಲೂಕಿನ ಕವಳವಾಡಿಯ ಮಾರುತಿ ನಾರಾಯಣ ಕರವೇಕರ (32), ಹಳೇ ಬೆಳಗಾವಿಯ ಯಲ್ಲಪ್ಪ ಪ್ರಕಾಶ ಸಲಗುಡೆ (35) ಹಾಗೂ ರಾಜವಾಡಿಯ ರಂಜಿತ ದಶರಥ ಪಾಟೀಲ (39) ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಕಾರ್ಖಾನೆಗೆ ಬೆಂಕಿ ಕೆನ್ನಾಲಿಗೆ ಚಾಚುತ್ತಿದ್ದಂತೆಯೇ ಸುಮಾರು 20ಕ್ಕೂ ಹೆಚ್ಚಿದ್ದ ಕಾರ್ಮಿಕರು ಹೊರಗೆ ಓಡಿ ಬಂದು ಅನಾಹುತದಿಂದ ತಪ್ಪಿಸಿಕೊಂಡಿದ್ದಾರೆ. ಆದರೆ, ಲಿಫ್ಟ್ ನಲ್ಲಿ ಸಿಲುಕಿಕೊಂಡಿದ್ದ ಯಲ್ಲಪ್ಪನಿಗೆ ಹೊರಬರಲು ಸಾಧ್ಯವಾಗದೆ ಅಲ್ಲಿಯೇ ಸುಟ್ಟು ಕರಕಲಾಗಿದ್ದಾನೆ.
ಯಲ್ಲಪ್ಪನ ಇಡೀ ದೇಹ ಸುಟ್ಟು ಕರಕಲಾಗಿದ್ದು, ಅವನ ಒಂದು ಮೂಳೆ ಕೂಡ ಸಿಗದೇ ಇರುವುದು ಘಟನೆಯ ಭೀಕರತೆಗೆ ಸಾಕ್ಷಿಯಾಗಿತ್ತು. ಗಾಯಾಳುಗಳ ಹಾಗೂ ಮೃತ ಯಲ್ಲಪ್ಪನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಅಗ್ನಿ ಶಾಮಕ ದಳದ ಸಿಬ್ಬಂದಿ ಬುಧವಾರ ಬೆಳಗಿನವರೆಗೂ ಬೆಂಕಿ ನಂದಿಸಲು ಹರಸಾಹಸಪಟ್ಟರು.
ಎನ್ ಡಿಆರ್ ಎಫ್ ತಂಡದವರು 17 ಗಂಟೆಗಳ ಕಾಲ ಶ್ರಮಿಸಿ ಯಲ್ಲಪ್ಪನ ಅಸ್ತಿ ಪಂಜರವನ್ನು ಹೊರತೆಗೆದರು. ಆತನ ಅಸ್ತಿ ಪಂಜರದ ಕೆಲವು ತುಣುಕುಗಳನ್ನು ಎಫ್ ಎಸ್ ಎಲ್ ಗೆ ಕಳುಹಿಸಿಕೊಡಲಾಗಿದೆ. ಬೆಂಕಿ ಅವಘಡದ ಮಾಹಿತಿ ಗೊತ್ತಾಗುತ್ತಿದ್ದಂತೆ ಸುತ್ತಮುತ್ತಲಿನ ಪ್ರದೇಶಗಳ ಜನರು ಕಾರ್ಖಾನೆ ಬಳಿ ಜಮಾಯಿಸಿದ್ದರು.