ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲ್ಲೇಶ್ವರ ಅಪಾರ್ಟ್ಮೆಂಟ್ವೊಂದರಲ್ಲಿ ಅಪರಿಚಿತ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಮಾರು 45 ವರ್ಷದ ಮಹಿಳೆಯ ಗುರುತು ಪತ್ತೆಯಾಗಿಲ್ಲ. ಆಕೆಯ ಪತ್ತೆಗಾಗಿ ನಗರದ ಎಲ್ಲಾ ಠಾಣೆಗಳಿಗೆ ಮಾಹಿತಿ ನೀಡಲಾಗಿದೆ.
ಮಂಗಳವಾರ ಬೆಳಗ್ಗೆ ಮಲ್ಲೇಶ್ವರಂನ ಮಾರ್ಗೋಸಾ ರಸ್ತೆಯ 15ನೇ ಕ್ರಾಸ್ನಲ್ಲಿರುವ ನಾಲ್ಕು ಅಂತಸ್ತಿನ ವಸತಿ ಕಟ್ಟಡದಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಗಿದೆ. ಮಹಿಳೆ ಕಟ್ಟಡದ ನಿವಾಸಿಯಾಗಿರಲಿಲ್ಲ. ಬೆಳಿಗ್ಗೆ 7.30 ರಿಂದ 7.45 ರ ನಡುವೆ ನಾಯಿಯೊಂದು ನಿರಂತರವಾಗಿ ಬೊಗಳಲು ಪ್ರಾರಂಭಿಸಿದ ನಂತರ ಕಟ್ಟಡದ ನಿವಾಸಿಯೊಬ್ಬರು ತಮ್ಮ ಫ್ಲಾಟ್ನಿಂದ ಹೊರಗೆ ಬಂದು ಪರಿಶೀಲಿಸಿದಾಗ ನಾಲ್ಕನೇ ಮಹಡಿಯಲ್ಲಿನ ಮೆಟ್ಟಿಲುಗಳ ಬಳಿ ಮಹಿಳೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಮೀಪದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಮಹಿಳೆ ಬ್ಯಾಗ್ನಲ್ಲಿ ಎರಡು ಹಗ್ಗಗಳೊಂದಿಗೆ ಬಂದಿರುವುದು ಕಂಡುಬಂದಿದೆ. ಭದ್ರತಾ ಸಿಬ್ಬಂದಿ ಇಲ್ಲದಿರುವುದನ್ನು ಗಮನಿಸಿದ ಕಟ್ಟಡ ಪ್ರವೇಶಿಸಿದ್ದಾಳೆ. ಆಕೆ ನಾಲ್ಕನೇ ಮಹಡಿಗೆ ಮೆಟ್ಟಿಲುಗಳನ್ನು ಹತ್ತಿ ಹಗ್ಗದಿಂದ ನೇಣು ಹಾಕಿಕೊಂಡಿರುವುದು ಕಂಡು ಬಂದಿದೆ.