ಹೊಸದಿಗಂತ ಡಿಜಿಟಲ್ ಡೆಸ್ಕ್:
ನೇಪಾಳದ ನುವಾಕೋಟ್ ಜಿಲ್ಲೆಯ ಶಿವಪುರಿ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ಏರ್ ಡೈನಾಸ್ಟಿ ಹೆಲಿಕಾಪ್ಟರ್ ಪತನಗೊಂಡಿದೆ. ಐದು ಮಂದಿ ಸಾವನ್ನಪ್ಪಿದ್ದಾರೆ.
ಹೆಲಿಕಾಪ್ಟರ್ ಕಠ್ಮಂಡುವಿನಿಂದ ಹೊರಟು ಸೈಫ್ರುಬೆನ್ಸಿಗೆ ತೆರಳುತ್ತಿತ್ತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಹೆಲಿಕಾಪ್ಟರ್ ಅನ್ನು ಹಿರಿಯ ಕ್ಯಾಪ್ಟನ್ ಅರುಣ್ ಮಲ್ಲಾ ಅವರು ಚಲಾಯಿಸಿದ್ದು, ಟೇಕ್ ಆಫ್ ಆದ ಕೇವಲ ಮೂರು ನಿಮಿಷಗಳ ನಂತರ ಹೆಲಿಕಾಪ್ಟರ್ ಸಂಪೂರ್ಣವಾಗಿ ಸಂಪರ್ಕ ಕಳೆದುಕೊಂಡಿತ್ತು ಎನ್ನಲಾಗಿದೆ.
ಹೆಲಿಕಾಪ್ಟರ್ ಟೇಕಾಫ್ ಆಗುವಾಗ ಅದರಲ್ಲಿ ನಾಲ್ವರು ಚೀನಾದ ಪ್ರಜೆಗಳು ಮತ್ತು ಪೈಲಟ್ ಸೇರಿದಂತೆ ಒಟ್ಟು ಐದು ಮಂದಿ ಇದ್ದರು. ಚೀನಾದ ಪ್ರಜೆಗಳು ರಾಸುವಾಗೆ ತೆರಳುತ್ತಿದ್ದರು. ಈ ವೇಳೆ ಕಠ್ಮಂಡುವಿನ ಹೊರವಲಯದಲ್ಲಿರುವ ಅರಣ್ಯ ಪ್ರದೇಶದಲ್ಲಿ ಸಂಪರ್ಕ ಕಳೆದುಕೊಂಡು ನೆಲಕ್ಕಪ್ಪಳಿಸಿದೆ ಎನ್ನಲಾಗಿದೆ.
ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮವು ಬುಧವಾರ ಮಧ್ಯಾಹ್ನ 1:54 ಕ್ಕೆ ಹೆಲಿಕಾಪ್ಟರ್ ಕಠ್ಮಂಡುವಿನಿಂದ ಹೊರಟಿತ್ತು ಎಂದು ಹೇಳಿದೆ. ಸೂರ್ಯ ಚೌರ್ ತಲುಪಿದ ನಂತರ 1:57 ರ ಸುಮಾರಿಗೆ ಹೆಲಿಕಾಪ್ಟರ್ ಅಧಿಕಾರಿಗಳೊಂದಿಗೆ ಸಂಪರ್ಕವನ್ನು ಕಳೆದುಕೊಂಡಿತು.