ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಂಗಳವಾರ ನಡೆದಿದ್ದ ಮಹಿಳಾ 50 ಕೆಜಿ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಕ್ಯೂಬಾದ ಯಸ್ನಿಲಿಸ್ ಗುಜ್ಮನ್ ಲೋಪೆಜ್ ಭಾರತದ ವಿನೇಶ್ ಫೋಗಟ್ ವಿರುದ್ಧ 5-0 ಅಂತರದಿಂದ ಹೀನಾಯವಾಗಿ ಸೋಲು ಅನುಭವಿಸಿದ್ದರು. ಆದ್ರೆ ಇದೀಗ ಅವರಿಗೆ ಅದೃಷ್ಟವೊಂದು ಕೈ ಹಿಡಿದು ಫೈನಲ್ ಆಡುವ ಸೌಭಾಗ್ಯ ಒದಗಿ ಬಂದಿದೆ.
ಹೌದು, ಸೆಮಿಫೈನಲ್ನಲ್ಲಿ ಸೋಲು ಕಂಡಿದ್ದ ಯಸ್ನಿಲಿಸ್ ಗುಜ್ಮನ್ ಇಂದು ಕಂಚಿನ ಪದಕಕ್ಕೆ ಸ್ಪರ್ಧಿಸಬೇಕಿತ್ತು. ಈ ಪಂದ್ಯ ಇನ್ನೇನು ಕೆಲವೇ ಗಂಟೆಗಳಲ್ಲಿ ಆರಂಭವಾಗಬೇಕು ಎನ್ನುವಷ್ಟರಲ್ಲಿ ಯಸ್ನಿಲಿಸ್ ಗುಜ್ಮನ್ಗೆ ಫೈನಲ್ ಪಂದ್ಯದ ಕರೆ ಬಂದಿದೆ. ಇದಕ್ಕೆ ಕಾರಣ ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಿದ್ದು.
50 ಕೆಜಿ ತೂಕ ವಿಭಾಗದಲ್ಲಿ ಸ್ಪರ್ಧಿಸಿದ್ದ ವಿನೇಶ್ ಫೈನಲ್ ಪಂದ್ಯಕ್ಕೂ ಮುನ್ನ ನಿಗದಿತ ತೂಕಕ್ಕಿಂತ 100 ಗ್ರಾಂ ಹೆಚ್ಚು ಇರುವ ಕಾರಣ ಅವರನ್ನು ಫೈನಲ್ನಿಂದ ಅನರ್ಹ ಮಾಡಲಾಗಿದೆ. ಹೀಗಾಗಿ ಫೈನಲ್ ಆಡುವ ಅವಕಾಶ ಗುಜ್ಮನ್ಗೆ ಲಭಿಸಿತು. ಫೈನಲ್ನಲ್ಲಿ ಗುಜ್ಮನ್ ಅವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತೆ ಅಮೆರಿಕದ ಸೆರಾ ಹಿಲ್ದಿಬ್ರೇಟ್ ಸವಾಲು ಎದುರಿಸಲಿದ್ದಾರೆ. ಪಂದ್ಯ ರಾತ್ರಿ 11. 23ಕ್ಕೆ ನಡೆಯಲಿದೆ.