ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತದ ಖ್ಯಾತ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಅವರು ಅನರ್ಹಗೊಂಡಿರುವುದು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ವಿನೇಶ್ ಫೋಗಟ್ ಪರವಾಗಿ ದೇಶವೇ ಒಗ್ಗೂಡಿ ನಿಂತಿದೆ.
ಭಾರತೀಯ ಒಲಿಂಪಿಕ್ಸ್ ಅಸೋಷಿಯೇಷನ್ (IOA) ಅಧ್ಯಕ್ಷೆ ಪಿ.ಟಿ.ಉಷಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಮಾಡಿದ್ದು, ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.
ಪಿ.ಟಿ.ಉಷಾ ಅವರಿಗೆ ನರೇಂದ್ರ ಮೋದಿ ಅವರು ಕರೆ ಮಾಡಿರುವ ಕುರಿತು ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಂಡಾವಿಯ ಅವರು ಸಂಸತ್ನಲ್ಲಿ ಮಾಹಿತಿ ನೀಡಿದ್ದಾರೆ. “50 ಕೆಜಿಗಿಂತ 100 ಗ್ರಾಂ ತೂಕ ಹೆಚ್ಚಿದ್ದ ಕಾರಣ ನೀಡಿ ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಲಾಗಿದೆ. ಈಗಾಗಲೇ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ ಪ್ರತಿಭಟನೆ ವ್ಯಕ್ತಪಡಿಸಿದೆ. ನರೇಂದ್ರ ಮೋದಿ ಅವರೂ ಪಿ.ಟಿ. ಉಷಾ ಅವರಿಗೆ ಕರೆ ಮಾಡುವ ಮೂಲಕ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರತಿಯೊಂದು ಹೆಜ್ಜೆಯಲ್ಲೂ ವಿನೇಶ್ ಫೋಗಟ್ ಅವರಿಗೆ ಕೇಂದ್ರ ಸರ್ಕಾರ ಸಹಕಾರ ನೀಡಿದೆ. ಅವರಿಗೆ ವೈಯಕ್ತಿಕ ಸಿಬ್ಬಂದಿಯನ್ನೂ ಭಾರತ ಕಳುಹಿಸಿದೆ. ಸಹಾಯಕ ಸಿಬ್ಬಂದಿಯನ್ನೂ ಅವರಿಗೆ ಒದಗಿಸಲಾಗಿದೆ. ಇದಕ್ಕೂ ಮೊದಲು ಕೂಡ ವಿನೇಶ್ ಫೋಗಟ್ ಅವರ ಸಾಧನೆಗೆ ಕೇಂದ್ರ ಸರ್ಕಾರ ಹಣಕಾಸು ನೆರವು ನೀಡಿದೆ. ಮುಂದಿನ ದಿನಗಳಲ್ಲೂ ನೆರವು ನೀಡಲಿದೆ ಎಂದು ಅವರು ತಿಳಿಸಿದ್ದಾರೆ.