ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿಗೆ ಮೆಟ್ರೋ ಸಿಟಿ ಸ್ಥಾನಮಾನ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದ್ದು, ಬಹು ದಿನಗಳ ಬೇಡಿಕೆಗೆ ಮತ್ತೊಮ್ಮೆ ಹಿನ್ನಡೆಯಾಗಿದೆ.
ಸಂಸತ್‌ನಲ್ಲಿ ನಡೆಯುತ್ತಿರುವ ಮಳೆಗಾಲದ ಅಧಿವೇಶನದಲ್ಲಿ ಮಾತನಾಡಿದ ಕೇಂದ್ರ ಹಣಕಾಸು ಸಚಿವಾಲಯದ ರಾಜ್ಯ ಸಚಿವ ಪಂಕಜ್ ಚೌಧರಿ, ಆದಾಯ ತೆರಿಗೆ ನಿಯಮಗಳು, 1962ರ ನಿಯಮ 2 ಎ ಅಡಿಯಲ್ಲಿ ಮೆಟ್ರೋ ನಗರಗಳು ಮತ್ತು ಇತರ ನಗರಗಳ ನಡುವೆ ವ್ಯತ್ಯಾಸವಿದೆ ಎಂದು ಹೇಳಿದರು. ಪ್ರಸ್ತುತ ದೇಶದ ನಾಲ್ಕು ಪ್ರಮುಖ ನಗರಗಳಾದ ಮುಂಬೈ, ದೆಹಲಿ, ಕೋಲ್ಕತಾ ಮತ್ತು ಚೆನ್ನೈಯನ್ನು ಮೆಟ್ರೋ ಸಿಟಿ ಎಂದು ಗುರುತಿಸಲಾಗುತ್ತಿದೆ.
ಮೆಟ್ರೋ ಸ್ಥಾನಮಾನ ದೊರೆತರಿಗೆ ಆ ನಗರಕ್ಕೆ ಮನೆ ಬಾಡಿಗೆ ಭತ್ಯೆ ತೆರಿಗೆ ವಿನಾಯಿತಿ ಸೇರಿದಂತೆ ಕೆಲವೊಂದು ಅನುಕೂಲಗಳು ಲಭಿಸುತ್ತವೆ. ಅಸ್ತಿತ್ವದಲ್ಲಿರುವ ಮೆಟ್ರೋ ನಗರಗಳಲ್ಲಿ ಸೆಕ್ಷನ್ 10 (13 ಎ) ಅಡಿಯಲ್ಲಿ ವಿನಾಯಿತಿ ಮಿತಿಗಳನ್ನು ಲೆಕ್ಕಹಾಕಲು ವೇತನದ ಶೇ. 50ರಷ್ಟನ್ನು ಪರಿಗಣಿಸಲಾಗುತ್ತದೆ. ಅಂದರೆ ಮೆಟ್ರೋ ನಗರಗಳಲ್ಲಿ ಮೂಲ ವೇತನದ ಶೇ. 50ರಷ್ಟನ್ನು ಮನೆ ಬಾಡಿಗೆ ಭತ್ಯೆ ತೆರಿಗೆ ವಿನಾಯಿತಿ ಪಡೆಯಬಹುದು. ಆದರೆ ಮೆಟ್ರೋಯೇತರ ನಗರಗಳ ನಿವಾಸಿಗಳು ತಮ್ಮ ಮೂಲ ವೇತನದ ಶೇ. 40ರಷ್ಟನ್ನು ಮಾತ್ರವೇ ಎಚ್‌ಆರ್‌ಎ ತೆರಿಗೆ ವಿನಾಯಿತಿ ಎಂದು ಕ್ಲೈಮ್ ಮಾಡಲು ಸಾಧ್ಯ.ಅಸ್ತಿತ್ವದಲ್ಲಿರುವ ನೀತಿಯನ್ನು ಬದಲಾಯಿಸುವ ಉದ್ದೇಶ ಸರ್ಕಾರಕ್ಕೆ ಇಲ್ಲ ಎಂದು ಪಂಕಜ್ ಚೌಧರಿ ಹೇಳಿದರು.
ತೆರಿಗೆ ದರಗಳನ್ನು ತರ್ಕಬದ್ಧಗೊಳಿಸುವುದು ಮತ್ತು ವಿನಾಯಿತಿಗಳು ಹಾಗೂ ಕಡಿತಗಳಿಂದ ದೂರ ಸರಿಯುವುದು ಸರ್ಕಾರದ ಘೋಷಿತ ನೀತಿ. ಆದ್ದರಿಂದ ಹೆಚ್ಚಿನ ನಗರಗಳನ್ನು ಮೆಟ್ರೋ ನಗರಗಳಾಗಿ ಘೋಷಿಸುವುದಿಲ್ಲ. ಅಲ್ಲದೆ ಎಚ್ಆರ್‌ಎ (House Rent Allowance) ಮೇಲಿನ ಹೆಚ್ಚಿನ ವಿನಾಯಿತಿಯನ್ನೂ ಅಂತಹ ನಗರಗಳಿಗೆ ವಿಸ್ತರಿಸುವುದಿಲ್ಲ ಎಂದು ಹೇಳಿದರು.
ಬೆಂಗಳೂರು ಬೃಹತ್ ಐಟಿ ಮತ್ತು ಸ್ಟಾರ್ಟ್ಅಪ್ ಹಬ್ ಆಗಿ ಬೆಳೆಯುತ್ತಿದೆ. ಹೆಚ್ಚಿನ ಜನಸಂಖ್ಯಾ ಸಾಂದ್ರತೆ, ಗಮನಾರ್ಹ ಆರ್ಥಿಕ ಚಟುವಟಿಕೆ ಮತ್ತು ವೇಗದ ಜೀವನಶೈಲಿಯಂತಹ ಇತರ ಮೆಟ್ರೋ ನಗರಗಳ ಎಲ್ಲ ಲಕ್ಷಣಗಳನ್ನು ಬೆಂಗಳೂರು ಹೊಂದಿದೆ. ಆದರೂ ಎಚ್‌ಆರ್‌ಎ ವಿಚಾರವಾಗಿ ಬೆಂಗಳೂರನ್ನು ಇನ್ನೂ ಮೆಟ್ರೋಯೇತರ ನಗರವಾಗಿಯೇ ಪರಿಗಣಿಸಲಾಗುತ್ತಿದೆ.