ಹಾಸನ-ಮಂಗಳೂರು ಹಳಿಯ ಮೇಲೆ ಗುಡ್ಡ ಕುಸಿತ: ಭರದಿಂದ ಸಾಗುತ್ತಿದೆ ಮಣ್ಣು ತೆರವು ಕಾರ್ಯಾಚರಣೆ

ಹೊಸದಿಗಂತ ವರದಿ, ಮಂಗಳೂರು

ಹಾಸನ ಜಿಲ್ಲೆಯ ಸಕಲೇಶಪುರ-ಬಾಳ್ಳುಪೇಟೆಯ ನಡುವೆ ರೈಲು ಹಳಿಯ ಮೇಲೆ ಗುಡ್ಡವು ಶುಕ್ರವಾರ ರಾತ್ರಿ ಕುಸಿದು ಬಿದ್ದು ಹಾಸನ-ಮಂಗಳೂರು ನಡುವಿನ ಹಳಿಯ ಮೇಲೆ ಭೂಕುಸಿತವಾದ ಹಿನ್ನೆಯಲ್ಲಿ ಶುಕ್ರವಾರ ಮದ್ಯರಾತ್ರಿಯಿಂದ ರೈಲು ಸಂಚಾರ ಸ್ಥಗಿತಗೊಂಡಿತ್ತು.

ಶುಕ್ರವಾರ ರಾತ್ರಿಯಿಂದಲೇ ಕಾರ್ಯಾಚರಣೆಯನ್ನು ಇಲಾಖೆ ಆರಂಭಿಸಿತ್ತು. ಶನಿವಾರ ಅಹರ್ನಿಶಿಯಾಗಿ ಮಣ್ಣು ತೆರವು ಕಾರ್ಯಾಚರಣೆಯನ್ನು ನಡೆಸಲಾಗಿತ್ತು. ಭಾನುವಾರವೂ ೪೩೦ ಕಾರ್ಮಿಕರು, ೨ ಜೆಸಿಬಿ ಮತ್ತು ೨ ಹಿಟಾಚಿಗಳ ಸಹಾಯದಿಂದ ಮಣ್ಣು ತೆರವು ಕಾರ್ಯಾರಣೆ ನಡೆಯಿತು.

ಹಳಿಯ ಮೇಲೆ ಬೃಹತ್ ಪ್ರಮಾಣದ ಮಣ್ಣಿನ ರಾಶಿ ಬಿದ್ದುದರಿಂದ ತೆರವು ಕಾರ್ಯಾರಣೆಯನ್ನು ತೀವ್ರಗತಿಯಲ್ಲಿ ನಡೆಸಲಾಗುತ್ತಿದ್ದರೂ ಕಾಮಗಾರಿ ಸಂಪೂರ್ಣವಾಗಿಲ್ಲ. ಈ ಕಾರಣದಿಂದ ಭಾನುವಾರವೂ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಅಲ್ಲದೆ ರೈಲ್ವೆ ಅಧಿಕಾರಿಗಳು ಸ್ಥಳದಲ್ಲಿದ್ದು ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ. ಕಾರ್ಯಾಚರಣೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ರೈಲ್ವೆ ಇಲಾಖೆ ಮಾಡಿದೆ.

ರೈಲು ಸಂಚಾರ ರದ್ದು
ಗುಡ್ಡ ಕುಸಿತದಿಂದಾಗಿ ಭಾನುವಾರ ಕಾರವಾರ- ಕೆಎಸ್‌ಆರ್ ಬೆಂಗಳೂರು ಪಂಚಗಂಗಾ ಸೂಪರ್-ಫಾಸ್ಟ್ ಎಕ್ಸ್‌ಪ್ರೆಸ್(೧೬೫೯೬), ಬೆಂಗಳೂರು – ಮುರ್ಡೇಶ್ವರ ಎಕ್ಸ್‌ಪ್ರೆಸ್ (೧೬೫೮೫) ರದ್ದಾಗಿದೆ. ಮಂಗಳೂರು ಸೆಂಟ್ರಲ್ – ವಿಜಯಪುರ ವಿಶೇಷ ಎಕ್ಸ್‌ಪ್ರೆಸ್(೦೭೩೭೮), ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್(೧೬೫೧೫), ಮಂಗಳೂರು ಯಶವಂತಪುರ ಎಕ್ಸ್‌ಪ್ರೆಸ್(೧೬೫೭೬) ಭಾನುವಾರ ಮತ್ತು ಸೋಮವಾರ ರದ್ದಾಗಿದೆ. ಮುರ್ಡೇಶ್ವರ – ಬೆಂಗಳೂರು ಎಕ್ಸ್‌ಪ್ರೆಸ್(೧೬೫೮೬) ಭಾನುವಾರ ಮುರ್ಡೇಶ್ವರದಿಂದ ಮಂಗಳೂರಿನ ತನಕ ಮಾತ್ರ ಸಂಚರಿಸಿತು. ವಿಜಯಪುರ-ಮಂಗಳೂರು ಸೆಂಟ್ರಲ್ ವಿಶೇಷ ಎಕ್ಸ್‌ಪ್ರೆಸ್ (೦೭೩೭೭) ರೈಲು ವಿಜಯಪುರದಿಂದ ಬಾಗಲಕೋಟೆ ತನಕ ಮಾತ್ರ ಸಂಚರಿಸಿತು.

ಇತರ ಮಾರ್ಗದಿಂದ ಪ್ರಯಾಣ
ಕಣ್ಣೂರು – ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್(೧೬೫೧೨) ರೈಲು ಮಂಗಳೂರು ಸೆಂಟ್ರಲ್, ಶೊರನೂರು, ಈರೋಡ್,ಸೇಲಂ, ಜೋಲಾರ್‌ಪೇಟೆ, ಬಂಗಾರ್‌ಪೇಟೆ ಮೂಲಕ ಬೆಂಗಳೂರಿಗೆ ಭಾನುವಾರ ಪ್ರಯಾಣಿಸಿತು.ಅದೇ ರೀತಿ ಬೆಂಗಳೂರು – ಕಣ್ಣೂರು ಎಕ್ಸ್‌ಪ್ರೆಸ್(೧೬೫೧೧) ಭಾನುವಾರ ಬೆಂಗಳೂರಿನಿಂದ ಬಂಗಾರಪೇಟೆ, ಜೋಲಾರಪೇಟೆ, ಸೇಲಂ,ಈರೋಡ್, ಶೊರ್‌ನೂರ್ ಮೂಲಕ ಮಂಗಳೂರಿಗೆ ಪ್ರಯಾಣಿಸಿತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!