ಹೊಸದಿಗಂತ ಮಡಿಕೇರಿ:
ಅಕ್ರಮವಾಗಿ ನಾಡ ಬಂದೂಕು ತಯಾರಿಸಿ ಮಾರಾಟ ಮಾಡುತ್ತಿದ್ದ ಆರೋಪಿ ಹಾಗೂ ಖರೀದಿಸಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಭಾಗಮಂಡಲ ಸಮೀಪದ ಸಣ್ಣಪುಲಿಕೋಟು ಗ್ರಾಮದ ಬಾಡಿಗೆ ಮನೆಯಲ್ಲಿ ವಾಸವಿದ್ದ ಕೇರಳ ರಾಜ್ಯ ಇಡುಕ್ಕಿ ಮೂಲದ ಸುರೇಶ್ (52),ಬಂದೂಕು ಖರೀಸಿದ ಕರಿಕೆಯ ಚೆತ್ತುಕಾಯ ನಿವಾಸಿ ಎನ್.ಜಿ.ಶಿವರಾಮ (45) ಪಿರಿಯಾಪಟ್ಟಣದ ಮಾಗಳಿ ನಿವಾಸಿ ಎಸ್.ರವಿ( 35) ಭಾಗಂಡಲದ ದೊಡ್ಡಪುಲಿಕೋಟು ನಿವಾಸಿ ಕೋಟಿ (55) ಬಂಧಿತ ಆರೋಪಿಗಳು.
ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯ ಸಣ್ಣಪುಲಿಕೋಟು ಗ್ರಾಮದ ಮನೆಯೊಂದರಲ್ಲಿ ಅಕ್ರಮವಾಗಿ ನಾಡ ಬಂದೂಕುಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಮಡಿಕೇರಿ ಉಪ ವಿಭಾಗದ ಡಿಎಸ್ಪಿ ಮಹೇಶ್ ಕುಮಾರ್ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಭಾಗಮಂಡಲ ಠಾಣೆಯ ಪಿಎಸ್ಐ ಶೋಭಾ ಲಮಾಣಿ ಹಾಗೂ ಸಿಬ್ಬಂದಿಗಳು ಸಣ್ಣಪುಲಿಕೋಟು ಗ್ರಾಮದ ಬಾಡಿಗೆ ಮನೆಯಲ್ಲಿ ವಾಸವಿದ್ದ ಕೇರಳ ರಾಜ್ಯ ಇಡುಕ್ಕಿ ಜಿಲ್ಲೆ ಮೂಲದ ಸುರೇಶ್ ಎಂಬಾತನ ಮನೆಯ ಮೇಲೆ ಧಾಳಿ ನಡೆಸಿ ಅಕ್ರಮವಾಗಿ ನಾಡ ಬಂದೂಕು ತಯಾರಿಸಲು ಬಳಸುತ್ತಿದ್ದ ಸಾಮಾಗ್ರಿಗಳು, ಎರಡು ನಾಡ ಬಂದೂಕು(ಎಸ್.ಬಿ.ಬಿ.ಎಲ್) ಹಾಗೂ ಒಂದು ನಾಡ ಪಿಸ್ತೂಲ್’ನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಬಳಿಕ ಆರೋಪಿ ಸುರೇಶ್ ಆಕ್ರಮವಾಗಿ ತಯಾರಿಸಿರುವ ನಾಡ ಬಂದೂಕುಗಳನ್ನು ಖರೀದಿ ಮಾಡಿದ್ದ ಎನ್.ಜಿ.ಶಿವರಾಮ, ಎಸ್. ರವಿ ಮತ್ತು ಕೋಟಿ ಅವರುಗಳಿಂದ ತಲಾ ಒಂದು ನಾಡ ಬಂದೂಕ (ಎಸ್.ಬಿ.ಬಿ.ಎಲ್)ನ್ನು ವಶಪಡಿಸಿಕೊಂಡು ಅವರನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 5 ನಾಡ ಬಂದೂಕು(ಎಸ್.ಬಿ.ಬಿ.ಎಲ್) ಹಾಗೂ ಒಂದು ನಾಡ
ಪಿಸ್ತೂಲ್’ನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ರಾಮರಾಜನ್ ಶ್ಲಾಘಿಸಿದ್ದಾರೆ.