ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾರಿಸ್ ಒಲಿಂಪಿಕ್ಸ್ ಸ್ಪರ್ಧೆಯಿಂದ ಅನರ್ಹಗೊಂಡ ಕುಸ್ತಿಪಟು ವಿನೇಶ್ ಪೋಗಟ್ ಶನಿವಾರ ಭಾರತಕ್ಕೆ ಆಗಮಿಸಿದ್ದಾರೆ.
ದೆಹಲಿಯ ವಿಮಾನ ನಿಲ್ದಾಣದಲ್ಲಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಪದಕ ಗೆಲ್ಲಲಾಗದ ನೋವಿನಲ್ಲಿದ್ದ ವಿನೇಶ್ ಅಭಿಮಾನಿಗಳನ್ನು ಕಂಡ ತಕ್ಷಣ ಜೋರಾಗಿ ಅಳುತ್ತಾ ಕೈ ಮುಗಿದು ಧನ್ಯವಾದ ತಿಳಿಸಿದರು. ಕುಟುಂಬದ ಸದಸ್ಯರು, ಮಾಜಿ ಒಲಿಂಪಿನ್, ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ ಸೇರಿ ಹಲವು ಕುಸ್ತಿಪಟುಗಳು ಈ ವೇಳೆ ಜತೆಗಿದ್ದರು.
ವಿಮಾನ ನಿಲ್ದಾಣದಿಂದ ಹೊರ ಬಂದ ತಕ್ಷಣ ವಿನೇಶ್ ಸಾಕ್ಷಿ ಮಲಿಕ್ ಅವರ ಎದೆಗಪ್ಪಿಕೊಂಡು ಕಣ್ಣೀರು ಸುರಿಸಿದರು. ಕ್ರೀಡಾಭಿಮಾನಿಗಳು ಕೂಡ ಅತ್ಯಂತ ಭಾವುಕರಾಗಿ ನಿಂತು ಬಿಟ್ಟರು.
ಒಲಿಂಪಿಕ್ಸ್‌ನಲ್ಲಿ ಮಹಿಳೆಯರ ಕುಸ್ತಿ 50 ಕೆ.ಜಿ ವಿಭಾಗದಲ್ಲಿ ಉತ್ಕೃಷ್ಟ ಪ್ರದರ್ಶನ ತೋರುವ ಮೂಲಕ ಫೈನಲ್ ತಲುಪಿದ್ದ ವಿನೇಶ್ ಅವರು ಇನ್ನೇನು ಫೈನಲ್ ಆಡಲು ಕೆಲವೇ ಗಂಟೆಗಳು ಬಾಕಿ ಇರುವಾಗ ಅವರನ್ನು ಅನರ್ಹ ಎಂದು ಘೋಷಿಸಲಾಯಿತು. ದೇಹತೂಕದಲ್ಲಿ ನಿಗದಿತ ಸ್ಪರ್ಧೆಯ ತೂಕಕ್ಕಿಂತ 100 ಗ್ರಾಂ ಹೆಚ್ಚಾದ ಕಾರಣಕ್ಕೆ ಅವರು ಅನರ್ಹಗೊಂಡಿದ್ದರು.