ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವ ಅವಕಾಶದಿಂದ ವಂಚಿತರಾಗಿ ಭಾರತಕ್ಕೆ ಮರಳಿದ ಕುಸ್ತಿಪಟು ವಿನೇಶ್ ಪೋಗಟ್ ಅವರಿಗೆ ಸ್ವಗ್ರಾಮದಲ್ಲಿ ಅದ್ಧೂರಿ ಸ್ವಾಗತ ದೊರೆತಿದೆ. ನೂರಾರು ಅಭಿಮಾನಿಗಳು ಡೋಲು ಬಾರಿಸಿ, ನೋಟು ಹಾಗೂ ಹೂವಿನ ಹಾರ ಹಾಕಿ, ಘೋಷಣೆಗಳನ್ನು ಕೂಗಿ ಸ್ವಾಗತಿಸಿದರು.
ವಿಮಾನ ನಿಲ್ದಾಣದಿಂದ ವಿನೇಶ್ ತವರಾದ ಹರ್ಯಾಣದ ಬಲಾಲಿಗೆ ಕಾರ್ನಲ್ಲಿ ಮೆರವಣಿ ಮಾಡುವ ಮೂಲಕ ಕರೆದೊಯ್ಯಲಾಗಿತ್ತು. ಇದೀಗ ತವರಿನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ವಿನೇಶ್ ವೇದಿಕೆಯಲ್ಲೇ ಪ್ರಜ್ಞೆ ತಪ್ಪಿದ ಘಟನೆ ನಡೆದಿದೆ. ಈ ವಿಡಿಯೊ ಇದೀಗ ವೈರಲ್ ಆಗಿದೆ.ವಿನೇಶ್ ಬೇಗನೆ ಚೇತರಿಸಿಕೊಳ್ಳಲಿ ಎಂದು ಜನರು ಆಶಿಸಿದ್ದಾರೆ.
ವೇದಿಕೆಯಲ್ಲಿ ಆಸೀನರಾಗಿದ್ದ ವಿನೇಶ್ ಏಕಾಏಕಿ ಮೂರ್ಛೆ ಹೋಗಿ ತಾವು ಕುಳಿತಿದ್ದ ಕುರ್ಚಿಗೆ ಒರಗಿಕೊಂಡು ಮಲಗಿರುವುದನ್ನು ಕಾಣಬಹುದಾಗಿದೆ. ಪಕ್ಕದಲ್ಲೇ ಇದ್ದ ಭಜರಂಗ್ ಪೂನಿಯಾ ವಿನೇಶ್ಗೆ ನೀರು ಕೊಟ್ಟು ಉಪಚರಿಸಿದ್ದಾರೆ.
ಫೈನಲ್ ಪಂದ್ಯಕ್ಕೂ ಮುನ್ನ ಹೆಚ್ಚಳವಾಗಿದ್ದ 2.8 ಕೆಜಿಯನ್ನು ಕಡಿಮೆ ಮಾಡಲು ವಿನೇಶ್ ರಾತ್ರಿಯಿಡೀ ಯಾವುದೇ ಆಹಾರ ಸೇವಿಸದೇ, ಸೈಕ್ಲಿಂಗ್ ನಡೆಸಿ, ಸ್ಕಿಪ್ಪಿಂಗ್ ಮಾಡಿದ್ದರು. ತೂಕ ಇಳಿಸಲು ಬೇಕಾಗುವ ಎಲ್ಲ ಕಸರತ್ತುಗಳನ್ನು ಕೈಗೊಂಡಿದ್ದರು. ಈ ಮೂಲಕ ಅವರು ಸಾಕಷ್ಟು ತೂಕ ಇಳಿಸಿದ್ದರು. ಕೊನೆ ಕ್ಷಣದಲ್ಲಿ ಅವರ ಕೂದಲು ಕತ್ತರಿಸಿ, ಬಟ್ಟೆಗಳ ಗಾತ್ರವನ್ನು ಕುಗ್ಗಿಸಿ, ದೇಹದಿಂದ ರಕ್ತವನ್ನು ಕೂಡ ತೆಗಿದಿದ್ದರು. ರಕ್ತ ತೆಗೆದ ಪರಿಣಾಮ ಅಸ್ವಸ್ಥರಾಗಿ ಆಸ್ಪತ್ರೆ ಕೂಡ ಸೇರಿದ್ದರು. ಈ ಅಸ್ವಸ್ಥದಿಂದ ಅವರು ಇನ್ನೂ ಸರಿಯಾಗಿ ಚೇತರಿಕೊಂಡಂತೆ ಕಾಣುತ್ತಿಲ್ಲ. ಭಾರತಕ್ಕೆ ಬಂದ ವೇಳೆ ಅವರು ಬಿಡುವಿಲ್ಲದೆ ಸರಿ ಸುಮಾರು 20 ಗಂಟೆ ಪ್ರಯಾಣಿಸಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಅವರು ಮೂರ್ಛೆ ಹೋದಂತೆ ಕಾಣುತ್ತಿದೆ. ಕೆಲ ದಿನಗಳು ವಿಶ್ರಾಂತಿ ಪಡೆದು ಆ ಬಳಿಕ ಸನ್ಮಾನ ಸಮಾರಂಭಕ್ಕೆ ಹೋದರೆ ಉತ್ತಮ ಎಂದು ಕೆಲ ನೆಟ್ಟಿಗರು ಸಲಹೆ ನೀಡಿದ್ದಾರೆ.