ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್ಗೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಇಂದು ಖಚಿತಪಡಿಸಿದೆ.
ರಷ್ಯಾದೊಂದಿಗಿನ ಸಂಘರ್ಷದ ನಂತರ ಪ್ರಧಾನಿ ಮೋದಿಯುದ್ಧ ಪೀಡಿತ ದೇಶವಾದ ಉಕ್ರೇನ್ಗೆ ಮೋದಿ ಮೊದಲ ಬಾರಿಗೆ ಪ್ರವಾಸ ಮಾಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ (ಪಶ್ಚಿಮ) ತನ್ಮಯ ಲಾಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 23ರ ಶುಕ್ರವಾರ ಉಕ್ರೇನ್ಗೆ ಅಧಿಕೃತ ಭೇಟಿ ನೀಡಲಿದ್ದಾರೆ. ಉಕ್ರೆನ್ ಜತೆ ನಮ್ಮ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದ 30 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಉಕ್ರೇನ್ಗೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಇದೊಂದು ಐತಿಹಾಸಿಕ ಭೇಟಿ. ಈ ಭೇಟಿಯು ಉಭಯ ನಾಯಕರ ನಡುವಿನ ಉನ್ನತ ಮಟ್ಟದ ಸಂವಾದಕ್ಕೆ ವೇದಿಕೆಇಯಾಗಿದೆ ಎಂದು ಅವರು ಹೇಳಿದ್ದಾರೆ.
ಜಿ 7 ಶೃಂಗಸಭೆಯ ಹೊರತಾಗಿ ಪ್ರಧಾನಿ ಮೋದಿ ಇಟಲಿಯಲ್ಲಿ ಜೆಲೆನ್ಸ್ಸ್ಕಿ ಅವರನ್ನು ಭೇಟಿ ಮಾಡಿದ್ದರು. ಕಳೆದ ತಿಂಗಳು ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಮಾಸ್ಕೋದಲ್ಲಿ ಭೇಟಿಯಾಗಿದ್ದರು. ಉಕ್ರೇನ್ ಸಂಘರ್ಷದ ಬಗ್ಗೆ ಭಾರತದ ನಿಲುವನ್ನು ವಿದೇಶಾಂಗ ಇಲಾಖೆ ಪುನರುಚ್ಚರಿಸಿತ್ತು.
ರಾಜತಾಂತ್ರಿಕ ಸಂವಾದವು ಸಂಘರ್ಷವನ್ನು (ರಷ್ಯಾ ಮತ್ತು ಉಕ್ರೇನ್ ನಡುವಿನ) ಪರಿಹರಿಸಬಹುದು ಮತ್ತು ಶಾಶ್ವತ ಶಾಂತಿಗೆ ಕಾರಣವಾಗಬಹುದು ಎಂದು ಭಾರತವು ಸ್ಪಷ್ಟ ಮತ್ತು ಸ್ಥಿರ ನಿಲುವು ಹೊಂದಿದೆ. ಎರಡೂ ದೇಶಗಳು ಸ್ವೀಕಾರಾರ್ಹ ಆಯ್ಕೆಗಳ ಮೂಲಕ ಮಾತ್ರ ಶಾಶ್ವತ ಶಾಂತಿ ಸಾಧಿಸಬಹುದು. ಇದು ಮಾತುಕತೆಯ ಮೂಲಕ ಮಾತ್ರ ಪರಿಹಾರವಾಗಬಹುದು” ಎಂದು ತನ್ಮಯ್ ಲಾಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಭಾರತವು ಎಲ್ಲ ದೇಶಗಳೊಂದಿಗೆ ಉತ್ತಮ ಸಂಬಂಧ ಹೊಂದಿದೆ. ನಿಮಗೆ ತಿಳಿದಿರುವಂತೆ ಪ್ರಧಾನಿ ಮೋದಿ ರಷ್ಯಾ ಮತ್ತು ಉಕ್ರೇನ್ ನಾಯಕರೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದಾರೆ. ಪ್ರಧಾನಿ ಇತ್ತೀಚೆಗೆ ರಷ್ಯಾಕ್ಕೆ ಭೇಟಿ ನೀಡಿದ್ದಾಗಲೂ ಮಾತನಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಸಂಕೀರ್ಣ ಸಮಸ್ಯೆಗೆ ಶಾಂತಿಯುತ ಪರಿಹಾರ ಕಂಡುಹಿಡಿಯಲು ಸಹಾಯ ಮಾಡಲು ಅಗತ್ಯವಿರುವ ಎಲ್ಲಾ ಬೆಂಬಲ ಭಾರತ ಸಿದ್ಧ . ಈ ಹಂತದಲ್ಲಿ, ಭಾರತ ಮತ್ತು ಉಕ್ರೇನ್ ನಾಯಕರ ನಡುವೆ ಈ ಚರ್ಚೆಗಳ ಫಲಿತಾಂಶ ಏನಾಗಲಿದೆ ಎಂದು ಊಹಿಸುವುದು ಅಸಾಧ್ಯ ಎಂದು ಲಾಲ್ ಹೇಳಿದರು.