ಹೊಸದಿಗಂತ ವರದಿ, ಮಂಗಳೂರು:
ಹಾಸನ ಜಿಲ್ಲೆಯ ಸಕಲೇಶಪುರ ಬಾಳ್ಳುಪೇಟೆಯ ನಡುವಿನ ಆಚಂಗಿ ದೊಡ್ಡ ನಾಗರ ಬಳಿ ರೈಲು ಹಳಿಯ ಮೇಲೆ ಗುಡ್ಡ ಕುಸಿದು ಹಳಿಯ ಮೇಲಿದ್ದ ಬೃಹತ್ ಮಣ್ಣನ್ನು ಸಂಪೂರ್ಣವಾಗಿ ಸೋಮವಾರ ತೆರವುಗೊಳಿಸಲಾಯಿತು.
ಅಲ್ಲದೆ ಕುಸಿತಗೊಂಡ ಸ್ಥಳದಲ್ಲಿ ಹರಿಯುತ್ತಿದ್ದ ಅಂತರ್ಜಲ ನಿಯಂತ್ರಣಕ್ಕೆ ಸೂಕ್ತ ಭದ್ರತೆ ಒದಗಿಸಲಾಯಿತು.ಕಾಮಗಾರಿ ಸಂಪನ್ನದ ಬಳಿಕ ಹಳಿಯನ್ನು ಪರಿಶೀಲನೆ ನಡೆಸಿ ಟ್ರಾಕ್ಸ್ ಫಿಟ್ ಎಂದು ಅಧಿಕಾರಿಗಳು ಸೂಚಿಸಿದರು.ನಂತರ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್ ದೊರಕಿದೆ.
ಆದುದರಿಂದ ನಿಗದಿತ ಸಮಯದ ವೇಳಾಪಟ್ಟಿಯಂತೆ ಎಲ್ಲಾ ರೈಲುಗಳ ಸಂಚಾರ ಮಂಗಳವಾರದಿಂದ ಆರಂಭವಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಅಂತರ್ಜಾಲ ತಡೆಗೆ ರಕ್ಷಾ ಕವಚ
ಕಳೆದ ಶುಕ್ರವಾರದಿಂದ ಸೋಮವಾರ ತನಕ ನಿರಂತರ ಅಹರ್ನಿಶಿಯಾಗಿ ಸಮರೋಪಾದಿಯ ಕಾರ್ಯಾರಣೆಯನ್ನು ರೈಲ್ವೆ ಇಲಾಖೆ ನಡೆಸಿತ್ತು. ಅಲ್ಲದೆ ಹಳಿಯ ಮೇಲೆ ಬಿದ್ದಿದ್ದ ಬೃಹತ್ ಮಣ್ಣನ್ನು ಸಂಪೂರ್ಣವಾಗಿ ಸೋಮವಾರ ತೆರವುಗೊಳಿಸಲಾಗಿತ್ತು. ಗುಡ್ಡ ಜರಿತವಾದ ಸ್ಥಳದಲ್ಲಿ ನಿರಂತರ ಅಂತರ್ಜಲ ಹೊರಗೆ ಬರುತ್ತಿತ್ತು.ಅಂತರ್ಜಲ ಆಗಮಿಸುತ್ತಿದ್ದ ಗುಡ್ಡದ ಒಂದು ಪಾರ್ಶ್ವದಲ್ಲಿ ಸಾವಿರಾರು ಚೀಲ ಮರಳು ಮತ್ತು ಬೋಲ್ಡ್ರಾಸ್ ಕಲ್ಲುಗಳನ್ನು ಹಾಕಿ ಅದರ ಮೇಲೆ ಬಲಿಷ್ಠ ಬಲೆಯನ್ನು ಹಾಕಿ ಭದ್ರಗೊಳಿಸಲಾಯಿತು. ಈ ಮೂಲಕ ಅಂತರ್ಜಲ ಮತ್ತೆ ಹೊರ ಬಂದು ಗುಡ್ಡ ಕುಸಿಯುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಯಿತು.
ಗುಡ್ಡದ ಮೇಲಿನಿಂದ ಕೆಳಗಿನ ತನಕ ಮರಳಿನ ಚೀಲ ಮತ್ತು ಬೋಲ್ಡ್ರಾಸ್ ಕಲ್ಲನ್ನು ಉಪಯೋಗಿಸಿ ಹಂತ ಹಂತವಾಗಿ ರಕ್ಷಾ ಕವಚ ನಿರ್ಮಾಣ ಕಾರ್ಯ ಸೋಮವಾರ ಸಂಪನ್ನವಾಯಿತು.ಅಲ್ಲದೆ ಜೆಸಿಬಿ ಮತ್ತು ಹಿಟಾಚಿ ಯಂತ್ರಗಳ ಮೂಲಕ ಗುಡ್ಡದ ಮೇಲೆ ಸಡಿಲವಾಗಿದ್ದ ಮಣ್ಣನ್ನು ಸಂಪೂರ್ಣವಾಗಿ ತೆರವುಗೊಳಿಸಲಾಯಿತು.
ಎಲ್ಲಾ ರೈಲುಗಳ ಸಂಚಾರ ಆರಂಭ
ಕಾಮಗಾರಿ ಸಮಾಪ್ತಿ ಬಳಿಕ ಗುಣ ಮಟ್ಟ ಪರೀಕ್ಷೆ ನಡೆಸಲಾಯಿತು. ನಂತರ ಬಾಕಿ ಉಳಿದಿದ್ದ ಅಲ್ಪ ಪ್ರಮಾಣದ ಕೆಲಸ ಕಾರ್ಯಗಳನ್ನು ಪೂರೈಸಲಾಯಿತು. ಬಳಿಕ ಪ್ರಯಾಣಿಕರ ಗರಿಷ್ಠ ಸುರಕ್ಷತಾ ದೃಷ್ಠಿಯಿಂದ ಸೋಮವಾರ ಮತ್ತೊಮ್ಮೆ ಹಳಿ ಪರೀಕ್ಷೆ ನಡೆಸಲಾಯಿತು. ರೈಲ್ವೆ ಅಧಿಕಾರಿಗಳು ಮತ್ತು ಇಂಜೀನಿಯರ್‌ಗಳು ಪ್ರಾಯೋಗಿಕ ಸಂಚಾರ ನಡೆಸಿ ರೈಲು ಪ್ರಯಾಣಕ್ಕೆ ಅನುಮತಿ ನೀಡಿದರು.
ಹಳಿಯು ರೈಲು ಸಂಚಾರಕ್ಕೆ ಯೋಗ್ಯವಾಗಿದೆ ಎಂದು ಅಧಿಕಾರಿಗಳು ಪ್ರಮಾಣಿಸಿದ ನಂತರ ರೈಲು ಸಂಚಾರಕ್ಕೆ ಅನುಮತಿ ನೀಡಿದರು.
ಆ.೨೧ರಿಂದ ಎರಡು ರೈಲುಗಳ ಆರಂಭ
ಈ ಹಿಂದೆ ರೈಲ್ವೆ ಇಲಾಖೆ ತಿಳಿಸಿದಂತೆ 19ರ ತನಕ ರದ್ದುಗೊಂಡ ರೈಲು ಸಂಚಾರ ಆ.20(ಮಂಗಳವಾರ)ರಿಂದ ಪುನರಾರಂಭವಾಗಲಿದೆ.
ಅಲ್ಲದೆ ಈ ಹಿಂದೆ ತಿಳಿಸಿದ ಮಾಹಿತಿಯಂತೆ ಆ.೨೦ರಂದು ರದ್ದುಗೊಂಡಿದ್ದ ಕಾರವಾರ-ಯಶವಂತಪುರ ಎಕ್ಸ್‌ಪ್ರೆಸ್(16516), ಮಂಗಳೂರು ಸೆಂಟ್ರಲ್ – ವಿಜಯಪುರ ವಿಶೇಷ ಎಕ್ಸ್‌ಪ್ರೆಸ್(07378) ರೈಲುಗಳು ಆ.21(ಬುಧವಾರ) ರಿಂದ ಸಂಚಾರ ಆರಂಭಿಸಲಿದೆ ಎಂದು ತಿಳಿದು ಬಂದಿದೆ.
ಆದುದರಿಂದ ಈ ಎರಡು ರೈಲುಗಳು ಬಿಟ್ಟು ಉಳಿದ ಎಲ್ಲಾ ರೈಲುಗಳು ಮಂಗಳವಾರದಿಂದ ಸಂಚರಿಸಲಿದೆ.