ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅವರು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಬೆಂಬಲಿಗರು ಸರಣಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರ ನಿರ್ಧಾರವು ಕಾಂಗ್ರೆಸ್ ಪಕ್ಷ ಮತ್ತು ಬೆಂಬಲಿಗರಲ್ಲಿ ವ್ಯಾಪಕ ಅಸಮಾಧಾನವನ್ನು ಹುಟ್ಟುಹಾಕಿದೆ. ವಿಶೇಷವಾಗಿ ಸಿದ್ದರಾಮಯ್ಯ ಅವರಿಗೆ ನಿಕಟವಾಗಿರುವ ಅಹಿಂದ ಸಮುದಾಯಗಳ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ.
ಇದೀಗ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿರುವ ಅಹಿಂದ ಸಮುದಾಯಗಳ ಮುಖಂಡರು, ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು, ಒಕ್ಕೂಟವು ಆಗಸ್ಟ್ 21 ಮತ್ತು 27 ರಂದು ಬೃಹತ್ ಪ್ರತಿಭಟನೆಗಳನ್ನು ಘೋಷಿಸಿದೆ.
ಮೊದಲ ದಿನ, ವಿವಿಧ ಹಿಂದುಳಿದ ಸಮುದಾಯಗಳು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪಂಜಿನ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದು, ಈ ಪ್ರತಿಭಟನೆಯಲ್ಲಿ ಸುಮಾರು 2,000 ಜನರು ಭಾಗವಹಿಸುವ ನಿರೀಕ್ಷೆಯಿದೆ.
ಆಗಸ್ಟ್ 27ರ ಪ್ರತಿಭಟನೆಯಲ್ಲಿ ಮಾವಳ್ಳಿ ಶಂಕರ್, ಅನಂತ್ ನಾಯಕ್, ಯೆನ್ನಗೆರೆ ವೆಂಕಟರಾಮಯ್ಯ ಮತ್ತು ಕೆಎಂ ರಾಮಚಂದ್ರಪ್ಪ ಸೇರಿದಂತೆ ಹಿಂದುಳಿದ ಸಮುದಾಯಗಳ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ.