ಹೊಸದಿಗಂತ ಡಿಜಿಟಲ್ ಡೆಸ್ಕ್:
ವೈದ್ಯರು ಹಾಗೂ ವೈದ್ಯಕೀಯ ವೃತ್ತಿಪರರ ರಕ್ಷಣೆಗೆ ತುರ್ತಾಗಿ ಕಾನೂನು ಜಾರಿಗೆ ತರಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ನಿಮ್ಹಾನ್ಸ್‌ನ ನಿವಾಸಿ ವೈದ್ಯರ ಸಂಘ ಪತ್ರ ಬರೆದು ಒತ್ತಾಯಿಸಿದೆ.
ಕೋಲ್ಕಾತ್ತಾದಲ್ಲಿ ವೈದ್ಯೆ ಮೇಲಿನ ಅತ್ಯಾಚಾರ ಹತ್ಯೆ ಹಾಗೂ ಸ್ವಾತಂತ್ರ್ಯ ದಿನಾಚರಣೆ ದಿನದಂದು ನಡೆದ ಶಾಂತಿಯುಕ ಪ್ರತಿಭಟನೆ ವೇಳೆ ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ನಡೆದ ಘಟನೆ ಬೆನ್ನಲ್ಲೇ ವೈದ್ಯರ ಸಂಘ ಪ್ರಧಾನಿ ಮೋದಿಯವರಿಗೆ ಪತ್ರ ಬರೆದು ಒತ್ತಾಯಿಸಿದೆ.
ವೈದ್ಯರ ವಿರುದ್ಧ ಹಿಂಸಾಚಾರದ ಘಟನೆಗಳು ಹೆಚ್ಚಾಗುತ್ತಿದ್ದು, ವೈದ್ಯಕೀಯ ವೃತ್ತಿಪರರು ಅಪಾಯದಲ್ಲಿದ್ದಾರೆ. ಇತ್ತೀಚಿನ ಘಟನೆಗಳು ಇದಕ್ಕೆ ಇಂಬು ನೀಡುತ್ತಿವೆ. ಹೀಗಾಗಿ, ವೈದ್ಯಕೀಯ ಸಿಬ್ಬಂದಿಗಳು ಹಾಗೂ ಸಂಸ್ಥೆ ರಕ್ಷಣೆಗೆ ಕಠಿಣ ಕಾನೂನು ಜಾರಿ ಅಗತ್ಯವಿದೆ. ಕಾನೂನು ಮೂಲಕ ಅಪರಾಧಿಗಳಿಗೆ ತ್ವರಿತ ಶಿಕ್ಷೆ ಹಾಗೂ ಸೂಕ್ತ ನ್ಯಾಯ ಸಿಗಲಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ವೈದ್ಯಕೀಯ ಸಿಬ್ಬಂದಿಗಳ ಮೇಲಿನ ಹಿಂಸಾಚಾರ, ಅತ್ಯಾಚಾರ ಖಂಡಿಸಿ ನಿಮ್ಹಾನ್ಸ್ ನಲ್ಲಿ ಕ್ಲಿನಿಕಲ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದ್ದು, ತುರ್ತು ಸೇವೆಗಳು ಮುಂದುವರೆಸುವುದಾಗಿಯೂ ವೈದ್ಯರು ತಿಳಿಸಿದ್ದಾರೆ.