ಹೊಸದಿಗಂತ ವರದಿ, ವಿಜಯಪುರ:
ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ರಾಜಿನಾಮೆ ನೀಡಿ ತನಿಖೆ ಎದುರಿಸಬೇಕು, ತಮ್ಮ ಪ್ರಾಮಾಣಿಕ ರಾಜಕಾರಣ ಜೀವನದ ಬದ್ಧತೆಯನ್ನು ಪ್ರದರ್ಶಿಸಬೇಕಾದ ಸಮಯ ಬಂದಿದ್ದು, ಕೂಡಲೇ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಒತ್ತಾಯಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ತನಿಖೆಗೆ ಆದೇಶ ನೀಡಿರುವುದರಿಂದ ಮುಖ್ಯಮಂತ್ರಿ ಹುದ್ದೆಯಲ್ಲಿ ಸಿದ್ದರಾಮಯ್ಯ ಅವರು ಮುಂದುವರೆಯುವುದು ಸರಿಯಲ್ಲ. ಸಿದ್ದರಾಮಯ್ಯ ಅವರು ದಿ.ರಾಮಕೃಷ್ಣ ಹೆಗಡೆ, ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡ, ಜೆ.ಎಚ್. ಪಟೆಲರಂತಹ ಮುತ್ಸದ್ಧಿ ನಾಯಕರ ಗರಡಿಯಲ್ಲಿ ಬೆಳೆದವರು. ನೀವು ಯಾವಾಗಲೂ ನಿಮ್ಮ ರಾಜಕೀಯ ಜೀವನ ತೆರೆದ ಪುಸ್ತಕ ಎಂದೇ ಹೇಳಿಕೊಳ್ಳುತ್ತೀರಿ. ಆದರೆ ಈಗ ಆ ಪುಸ್ತಕ ಕೆಲವು ಪುಟಗಳನ್ನು ಜನರಿಗೋಸ್ಕರ ಮುಚ್ಚಿದ್ದಿರಿ ಎನ್ನುವ ಸಂಶಯ ಬರುತ್ತಿದೆ. ಇಂದು ನೀವು ಮುಡಾ ಹಗರಣದ ಆರೋಪದಲ್ಲಿ ನಿಮ್ಮ ಆಪ್ತರೊಂದಿಗೆ ಸಿಕ್ಕು ಜನತೆಯ ಆಕ್ರೋಶಕ್ಕೆ ಬಲಿಯಾಗುತ್ತಿದ್ದೀರಿ, ಹೀಗಾಗಿ ಎಚ್ಚೆತ್ತುಕೊಳ್ಳಬೇಕು. ಹಿಂದೆ ದಿ.ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದಾಗ ಪೋನ್ ಕದ್ದಾಲಿಕೆ ಎಂಬ ಸಣ್ಣ ಆರೋಪ ಬಂದಾಗ ಮುಖ್ಯಮಂತ್ರಿ ಹುದ್ದೆಗೆ ತಕ್ಷಣ ರಾಜಿನಾಮೆ ನೀಡಿ, ತನಿಖೆ ಎದುರಿಸಿ, ರಾಜ್ಯ ರಾಜಕಾರಣದ ಗೌರವಕ್ಕೆ ಹೊಸ ಭಾಷ್ಯ ಬರೆದರು. ಅವರ ಗರಡಿಯಲ್ಲಿ ಬೆಳೆದ ತಾವು ಇಂದು ಮುಡಾದಂತ ದೊಡ್ಡ ಹಗರಣದ ಆರೋಪ ಎದುರಿಸುತ್ತಿರುವಿರಿ. ನೀವು ರಾಜಿನಾಮೆ ನೀಡಿ ತನಿಖೆ ಎದುರಿಸುವುದನ್ನು ಬಿಟ್ಟು, ಸಾಂವಿಧಾನಿಕ ಹುದ್ದೆಯ ಗೌರವಕ್ಕೆ ಧಕ್ಕೆ ಬರುವ ಹಾಗೆ, ರಾಜ್ಯಪಾಲರ ವಿರುದ್ಧ ಟೀಕಾ ಪ್ರಹಾರ ಮಾಡುವುದರಲ್ಲಿ ಮಗ್ನರಾಗಿದ್ದೀರಿ. ರಾಜ್ಯಪಾಲರು ತಮ್ಮ ಕರ್ತವ್ಯವನ್ನು ಕಾನೂನು ಬದ್ಧವಾಗಿ ಮಾಡಿರುವುದನ್ನು ಕಾನೂನು ಪದವಿ ಪಡೆದ ತಾವು ಖಂಡಿಸುತ್ತಿರುವುದು ಸರಿಯಾಗಿದೇಯೇ ? ಎಂಬುದನ್ನು ಆತ್ಮವಾಲೋಕನ ಮಾಡಿಕೊಳ್ಳಿ, ನೀವು ನಿಮ್ಮ ಸುತ್ತಲೂ ಇರುವ ನಿಮ್ಮ ಹಿತವನ್ನು ಬಯಸುವಂತೆ, ನಿಮಗೆ ಸದಾ ಹೊಗಳುವ ಹಿತ ಶತೃಗಳ, ಮಾತಿಗೆ ಮರುಳಾಗಿ ಮುಡಾದಂತ ಹಗರಣದ ಗುಂಡಿಗೆ ಬಿದ್ದು ಒದ್ದಾಡುತ್ತಿರುವಿರಿ. ನೀವು ಸದಾ ಅಂತಹ ಹಿತ ಶತೃಗಳ ಮಾತಿಗೆ ಮರಳುದಾರೆ ಹಗರಣದ ಗುಂಡಿಯ ಪ್ರಪಾತಕ್ಕೆ ಹೋಗುವುದರಲ್ಲಿ ಸಂದೇಹವೇ ಇಲ್ಲ, ಹೀಗಾಗಿ ನೀವು ದಕ್ಷ ರಾಜಕಾರಣಿ ಎಂದು ಸಾಬೀತುಪಡಿಸಲು ತಕ್ಷಣವೇ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.