ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರ್… ನನ್ನ ತಂದೆಯನ್ನ ಜೈಲಿಗೆ ಹಾಕಿ… ಈ ರೀತಿ ಹೇಳಿದ್ದು ಐದು ವರ್ಷದ ಬಾಲಕ.
ಹಿಂದೆ ಜನರು ಪೊಲೀಸ್ ಠಾಣೆ ಅಂದ್ರೆ ಹೆದರುತ್ತಿದ್ದರು. ಪೊಲೀಸ್ ಠಾಣೆಗೆ ಹೋಗುವುದು ಅಗೌರವ ಎಂದು ಭಾವಿಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ .
ಹೌದು, ಇಂದು ಚಿಕ್ಕ ಮಕ್ಕಳು ತಮ್ಮ ತಂದೆ-ತಾಯಿಯ ವಿರುದ್ದವೇ ದೂರು ಸಲ್ಲಿಸುವ ಪ್ರಕರಣಗಳು ಆಗಾಗ ವರದಿಯಾಗುತ್ತಿರುತ್ತವೆ. ಬೆಂಗಳೂರಿನಲ್ಲಿ ಮಗುವೊಂದು ತಾಯಿ ಹೊಡೆಯುತ್ತಾಳೆ ಎಂದು ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿತ್ತು. ಕೆಲ ಮಕ್ಕಳು ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ಕೊಡ್ತಿಲ್ಲ ಎಂದು ಫೋನ್ ಮಾಡಿ ಆಟದ ಮೈದಾನಕ್ಕೆ ಪೊಲೀಸರನ್ನು ಕರೆಸಿಕೊಂಡಿದ್ದ ವಿಡಿಯೋಗಳು ವೈರಲ್ ಆಗಿದ್ದವು.
ಇದೀಗ ಒಂದು ವಿಡಿಯೋ ವೈರಲ್ ಆಗಿದ್ದು, ಪೊಲೀಸ್ ಠಾಣೆಗೆ ಅಳುತ್ತಾ ಬಂದ ಬಾಲಕ ಕೊಂಚವೂ ಹೆದರದೇ ಪೊಲೀಸರ ಮುಂದೆ ಕುಳಿತು ದೂರು ಸಲ್ಲಿಸಿದ್ದಾನೆ. ಈ ಎಲ್ಲಾ ಘಟನೆಯನ್ನು ಠಾಣೆಯಲ್ಲಿದ್ದವರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡಿದ್ದಾರೆ. ದೂರು ಸಲ್ಲಿಸಿದ ಬಳಿಕ ಬಾಲಕ ಖುಷಿಯಿಂದ ಅಲ್ಲಿಂದ ಹಿಂದಿರುಗಿ ಹೋಗಿದ್ದಾನೆ.
ಈ ಘಟನೆ ಮಧ್ಯ ಪ್ರದೇಶದ ಪೊಲೀಸ್ ಠಾಣೆಯೊಂದರಲ್ಲಿ ನಡೆದಿದೆ. ಠಾಣೆಯಲ್ಲಿದ್ದ ಅಧಿಕಾರಿ ಬಾಲಕನ ಮಾತುಗಳನ್ನು ತಾಳ್ಮೆಯಿಂದ ಕೇಳಿ ಆತನನ್ನು ಸಮಾಧಾನಗೊಳಿಸಿ ಅಲ್ಲಿಂದ ಕಳುಹಿಸಿದ್ದಾರೆ. ನನ್ನ ಹೆಸರು ಹಸನೈನ್, ತಂದೆ ಇಕ್ಬಾಲ್. ಅಪ್ಪ ನದಿಗೆ ಬಳಿ ಹೋಗಲು ಬಿಡಲ್ಲ. ರಸ್ತೆ ಹತ್ರ ಹೋಗಲು ಸಹ ಬಿಡಲ್ಲ. ಹಾಗಾಗಿ ತಂದೆ ವಿರುದ್ಧ ತನಿಖೆ ನಡೆಸಿ. ಅವರನ್ನು ಜೈಲಿನೊಳಗೆ ಹಾಕಬೇಕು ಎಂದು ಹೇಳಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.