ಮಲಯಾಳಂ ಸಿನಿಮಾ ರಂಗದಲ್ಲಿ ಬಿರುಗಾಳಿ ಎಬ್ಬಿಸಿದ ಹೇಮಾ ವರದಿ: 17 ದೂರುಗಳು ದಾಖಲು!

ಹೊಸದಿಗಂತ ಡಿಜಿಟಲ್ ಡೆಸ್ಕ್; 

ಮಲಯಾಳಂ ಸಿನಿಮಾ ರಂಗದಲ್ಲಿ ಬಿರುಗಾಳಿ ಎಬ್ಬಿಸಿದ ಹೇಮಾ ವರದಿ, ಇದೀಗ ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯ ) ಕುರಿತಂತೆ ಬಹಿರಂಗವಾಗಿ ನಟಿಯರು ಮಾತಾಡುತ್ತಿದ್ದಾರೆ. ಜೊತೆಗೆ ದೂರುಗಳು ದಾಖಲಾಗುತ್ತಿವೆ. ಈವರೆಗೂ ಪೊಲೀಸರು 17 ದೂರುಗಳನ್ನು ದಾಖಲಿಸಿಕೊಂಡಿದ್ದಾರೆ.

ವರದಿಯನ್ನು ಗಂಭೀರವಾಗಿ ತಗೆದುಕೊಂಡಿರುವ ಸರಕಾರದ ನಡೆಯನ್ನು ಅಲ್ಲಿನ ರಾಜಕೀಯ ಪಕ್ಷಗಳು ಪ್ರಶ್ನೆ ಮಾಡುತ್ತಿವೆ. ಈವರೆಗೂ ಬಹಿರಂಗವಾಗದ ವರದಿಯನ್ನು ಈಗ ಆರ್.ಟಿ.ಐ ಅಡಿಯಲ್ಲಿ ಕೊಟ್ಟಿದ್ದು ಯಾಕೆ ಎಂದು ಪ್ರಶ್ನೆ ಮಾಡಲಾಗುತ್ತಿದೆ. ಈ ನಡುವೆ ನಟಿಯರು ದೂರುಗಳನ್ನು ದಾಖಲಿಸುತ್ತಿದ್ದಾರೆ.

ಮಲಯಾಳಂ ಸಿನಿಮಾ ರಂಗದಲ್ಲಿ ಸಹ ಕಲಾವಿದೆಯಾಗಿ ಗುರುತಿಸಿಕೊಂಡಿರೋ ನಟಿ ಸೋನಿಯಾ ಮಲಹಾರ್ ಸೇರಿದಂತೆ ಅನೇಕ ನಟಿಯರು ಮುಂದೆ ಬಂದು, ದೂರುಗಳನ್ನು ದಾಖಲಿಸುತ್ತಿದ್ದಾರೆ. ಇನ್ನೂ ಹಲವರು ದೂರು ನೀಡಲು ಚಿಂತನೆ ಕೂಡ ನಡೆಸಿದ್ದಾರಂತೆ. ಹಾಗಾಗಿ ನಟಿಯರು ಒತ್ತಡದಲ್ಲಿದ್ದಾರೆ ಅನ್ನುವ ಮಾಹಿತಿಯೂ ಇದೆ.

ನಟ ಪೃಥ್ವಿರಾಜ್ ಸುಕುಮಾರನ್‍ ರಿಯಾಕ್ಷನ್
ಈ ವರದಿ ಕುರಿತಂತೆ ಪ್ರಮುಖ ನಟರಾರೂ ಬಹಿರಂಗವಾಗಿ ಮಾತಾಡಿರಲಿಲ್ಲ. ಮೊದಲ ಬಾರಿಗೆ ನಟ, ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್‍ ಮಾತಾಡಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಪೃಥ್ವಿರಾಜ್‍ , ಹೇಮಾ ವರದಿಯಲ್ಲಿನ ಹೆಸರುಗಳನ್ನು ಸರಕಾರವೇ ಬಹಿರಂಗ ಪಡಿಸಬೇಕು. ಚಿತ್ರೀಕರಣದ ಸ್ಥಳದಲ್ಲಿನ ಸುರಕ್ಷತೆಯ ಬಗ್ಗೆ ಗಮನ ಹೆರಿಸಬೇಕು. ಏಕರೂಪದ ಮಾರ್ಗಸೂಚಿಯನ್ನು ತಯಾರಿಸಬೇಕು. ತಪ್ಪು ಯಾರೇ ಮಾಡಿದ್ದರೂ ಅವರ ಮೇಲೆ ತನಿಖೆ ಆಗಿ ಶಿಕ್ಷೆಯಾಗಬೇಕು. ಮಹಿಳೆಯರು ಈ ವಿಷ್ಯದಲ್ಲಿ ಸುಳ್ಳು ಹೇಳಿದ್ದರೂ ಅವರಿಗೆ ಶಿಕ್ಷೆ ಆಗಲಿ ಎಂದಿದ್ದಾರೆ.

ಆರಂಭಿಕ ಹಂತಗಳಲ್ಲಿ ಕೆಲವು ತಪ್ಪುಗಳು ಆಗಿರಬಹುದು. ಕಿರುಕುಳ ಮತ್ತು ಲೈಂಗಿಕ ದೌರ್ಜನ್ಯದ ಘಟನೆಗಳ ಬಗ್ಗೆ ಸಂಪೂರ್ಣ ಮತ್ತು ವಿವರವಾದ ತನಿಖೆಯ ಅಗತ್ಯವಿದೆ. ಆರೋಪಿಗಳು ತನಿಖೆಯನ್ನು ಎದುರಿಸಲೇಬೇಕು. ಮತ್ತು ತನಿಖೆ ಎದುರಿಸುವಾಗ ತಮ್ಮ ಸ್ಥಾನದಿಂದ ಕೆಳಗೆ ಇಳಿದಿರಬೇಕು ಎಂದು ಪೃಥ್ವಿರಾಜ್ ಮಾತನಾಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!