ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಪರಾಧದ ಆರೋಪ ಹೊತ್ತಿರುವ ವ್ಯಕ್ತಿಗೆ ಸೇರಿದ ಆಸ್ತಿಯನ್ನು ಧ್ವಂಸ ಮಾಡಲು ಸಾಧ್ಯವಿಲ್ಲ. ಇಂತಹ ಸನ್ನಿವೇಶದಲ್ಲಿ ಆರೋಪಿಗಳ ಮನೆ ಸೇರಿದಂತೆ ಸ್ಥಿರಾಸ್ತಿಗಳನ್ನು ಅಧಿಕಾರಿಗಳು ಹೇಗೆ ಧ್ವಂಸ ಮಾಡುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ಖಾರವಾಗಿ ಪ್ರಶ್ನಿಸಿದೆ.
ಗಂಭೀರ ಅಪರಾಧಗಳ ಆರೋಪಿಗಳ ಮನೆಗಳ ವಿರುದ್ಧ ಅಧಿಕಾರಿಗಳು ಆಗಾಗ್ಗೆ ಕೈಗೊಳ್ಳುವ ಬುಲ್ಡೋಜರ್ ಕ್ರಮ ವಿರುದ್ಧದ ಮನವಿಗಳನ್ನು ಆಲಿಸಿದ ನ್ಯಾಯಾಲಯ, ವ್ಯಕ್ತಿಯನ್ನು ಅಪರಾಧಿಯೆಂದು ನಿರ್ಣಯಿಸಿದರೂ ಆಸ್ತಿಯನ್ನು ಕೆಡವಲು ಸಾಧ್ಯವಿಲ್ಲ ಎಂದು ಹೇಳಿದೆ.
ಮುಸ್ಲಿಂ ವಿದ್ವಾಂಸರ ಸಂಸ್ಥೆ, ಜಮಿಯತ್ ಉಲಮಾ-ಎ-ಹಿಂದ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಆರ್.ಗವಾಯಿ ನೇತೃತ್ವದ ಪೀಠ, ತಂದೆಗೆ ದಂಗೆಕೋರ ಮಗನಿರಬಹುದು. ಹಾಗಂತ ಇರುವ ಮನೆ ಕೆಡವಿದರೆ ಅವರು ಹೋಗುವುದು ಎಲ್ಲಿಗೆ? ಇದು ಸೂಕ್ತವಾದ ಮಾರ್ಗವಲ್ಲ ಎಂದರು.
ವಿಚಾರಣೆ ವೇಳೆ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕಾನೂನು ಉಲ್ಲಂಘನೆಯಾದಾಗ ಮನೆಗಳನ್ನು ಕೆಡವಲಾಗುತ್ತಿದೆ. ಮುಖ್ಯವಾಗಿ ನಗರಸಭೆ ಕಾನೂನು ಉಲ್ಲಂಘನೆಯಾದರೆ ಮಾತ್ರ ಕ್ರಮಕೈಗೊಳ್ಳುತ್ತೇವೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ನಿಯಮ ಉಲ್ಲಂಘಿಸಿದರೆ ಧ್ವಂಸ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಆರೋಪಿಗಳ ಮನೆ ಧ್ವಂಸ ಒಪ್ಪುವುದಿಲ್ಲ ಎಂದಿತು.
ಈ ವೇಳೆ ಅನಧಿಕೃತ ಕಟ್ಟಡಗಳನ್ನು ಕೆಡವಲು ಮಾರ್ಗಸೂಚಿಯ ಅಗತ್ಯವನ್ನು ನ್ಯಾಯಮೂರ್ತಿ ವಿಶ್ವನಾಥನ್ ಗಮನಿಸಿದರು. ನ್ಯಾಯಮೂರ್ತಿ ಗವಾಯಿ, ಸಲಹೆಗಳು ಬರಲಿ. ನಾವು ಪ್ಯಾನ್-ಇಂಡಿಯಾ ಆಧಾರದ ಮೇಲೆ ಮಾರ್ಗಸೂಚಿಗಳನ್ನು ನೀಡುತ್ತೇವೆ ಎಂದರು. ಸೆಪ್ಟೆಂಬರ್ 17ಕ್ಕೆ ವಿಚಾರಣೆ ಮುಂದೂಡಲಾಗಿದೆ.