ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಝೈದ್ ಖಾನ್ ಅಭಿನಯದ ‘ಕಲ್ಟ್’ ಸಿನಿಮಾ ಟ್ರೇಲರ್ ಬಿಡುಗಡೆಯಾದ ಬಳಿಕ ನಟನ ಬಗ್ಗೆ ಹಲವು ಚರ್ಚೆಗಳು ಶುರುವಾಗಿದೆ. ಟ್ರೇಲರ್‌ನಲ್ಲಿ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇದರಿಂದ ಅಭಿಮಾನಿಗಳ ಜೊತೆಗೆ ಟೀಕಾಕಾರರ ಗಮನವೂ ಸೆಳೆದಿದೆ. ಚಿತ್ರದ ಪ್ರಚಾರದ ವೇಳೆ ಝೈದ್ ಖಾನ್ ಎದುರಿಸಿದ ಕೆಲವು ಸೆನ್ಸಿಟಿವ್ ಪ್ರಶ್ನೆಗಳು ಇದೀಗ ವೈರಲ್ ಆಗಿವೆ.
ಝೈದ್ ಖಾನ್ ಮುಸ್ಲಿಂ ಧರ್ಮಕ್ಕೆ ಸೇರಿದವರು ಎಂಬ ಕಾರಣಕ್ಕೆ, ಸಂಕ್ರಾಂತಿ ಹಬ್ಬ ಆಚರಿಸಿದ್ದಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, “ನಾನು ಯಾವತ್ತೂ ಧರ್ಮವನ್ನು ಮನುಷ್ಯತ್ವದ ಚೌಕಟ್ಟಿನಲ್ಲಿ ನೋಡುತ್ತೇನೆ. ಎಲ್ಲಾ ಧರ್ಮಗಳಿಗೂ ಸಮಾನ ಗೌರವ ನನ್ನ ನಿಲುವು” ಎಂದು ಹೇಳಿದರು. ತಮ್ಮ ಮೊದಲ ಸಿನಿಮಾ ‘ಬನಾರಸ್’ ಕಾಶಿಯಲ್ಲಿ ಚಿತ್ರೀಕರಣಗೊಂಡಿದ್ದುದನ್ನೂ ಅವರು ನೆನಪಿಸಿದರು.
ಇನ್ನೊಂದು ಹಂತದಲ್ಲಿ ಸಿನಿಮಾದಲ್ಲಿನ ಮದ್ಯಪಾನ ಮತ್ತು ಹಿಂಸಾಚಾರದ ದೃಶ್ಯಗಳನ್ನು ಉಲ್ಲೇಖಿಸಿ ‘ಹರಾಮ್’ ವಿಚಾರ ಕೇಳಿಬಂದಾಗ, ಝೈದ್ ಖಾನ್ ಸ್ಪಷ್ಟ ಉತ್ತರ ನೀಡಿದರು. “ನಟನಾಗಿ ಪಾತ್ರವನ್ನು ಅಭಿನಯಿಸುವುದು ನನ್ನ ಕೆಲಸ. ಅದನ್ನು ನನ್ನ ವೈಯಕ್ತಿಕ ಜೀವನದೊಂದಿಗೆ ಮಿಶ್ರ ಮಾಡಬಾರದು” ಎಂದರು.
ಪುನಃ ಇದೇ ವಿಚಾರ ಬಂದಾಗ, “ನನ್ನ ಜೀವನದ ಲೆಕ್ಕವನ್ನು ನಾನು ದೇವರ ಮುಂದೆ ಕೊಡುವೆ” ಎಂದು ನೇರವಾಗಿ ಹೇಳಿದ ಅವರ ಮಾತುಗಳಿಗೆ ಹಲವರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಜನವರಿ 23ರಂದು ಬಿಡುಗಡೆಯಾಗಲಿರುವ ‘ಕಲ್ಟ್’ ಸಿನಿಮಾದಲ್ಲಿ ಝೈದ್ ಖಾನ್ ಜೊತೆಗೆ ರಂಗಾಯಣ ರಘು, ರಚಿತಾ ರಾಮ್, ಮಲೈಕಾ ವಾಸುಪಾಲ್ ಹಾಗೂ ಅಚ್ಯುತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.


