ದಿಗಂತ ವರದಿ ಹಾಸನ :
ಎತ್ತಿನಹೊಳೆ ಉದ್ಘಾಟನೆಗೆ ಸಾಲು ಸಾಲು ವಿಘ್ನಗಳು ಎದುರಾಗುತ್ತಿದ್ದು, ವೇದಿಕೆ ಕುಸಿದು ಬಿದ್ದಿದೆ, ಇಷ್ಟೇ ಅಲ್ಲದೆ ಪತ್ರಕರ್ತರ ವಾಹನ ಅಪಘಾತಕ್ಕೀಡಾಗಿದೆ.
ಹೌದು, ಎತ್ತಿನಹೊಳೆ ಯೋಜನೆ ಹಂತ-1 ಗಂಗಾ ಪೂಜೆ ಮತ್ತು ಬಾಗೀನ ಅರ್ಪಣೆ ಕಾರ್ಯಕ್ರಮಕ್ಕೆ ಸಿದ್ದಗೊಂಡಿದ್ದ ವೇದಿಕೆ ಎದುರಿನ ಮಂಟಪದ ಚಪ್ಪರ ಉದ್ಘಾಟನೆಗೂ ಮುನ್ನ ಮುರಿದು ಬಿದ್ದಿದೆ
ಸಕಲೇಶಪುರ ತಾಲ್ಲೂಕಿನ, ಹೆಬ್ಬನಹಳ್ಳಿಯಲ್ಲಿ ಸಿಎಂ, ಡಿಸಿಎಂ ಹಾಗೂ ಸಚಿವರು ನಿಂತು ಬಾಗೀನ ಅರ್ಪಿಸಲು ನಿರ್ಮಿಸಿದ್ದ ಮಂಟಪಕ್ಕೆ ಹಾಕಿದ್ದ ಹೂವಿನ ಚಪ್ಪರ ದಿಢೀರ್ ಕುಸಿದು ಬಿದ್ದಿದೆ.
ಪತ್ರಕರ್ತರ ವಾಹನ ಅಪಘಾತ
ಸಿಎಂ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಪತ್ರಕರ್ತರ ವಾಹನ ಸಕಲೇಶಪುರ ತಾಲೂಕಿನ ಬಾಳ್ಳುಪೇಟೆ ಬಳಿ ಬ್ರೇಕ್ ಫೇಲ್ ಆಗಿ ಮುಂದೆ ಚಲಿಸುತ್ತಿದ್ದ ಲಾರಿಗೆ ಡಿಕ್ಕಿಯಾಗಿದೆ.
ವಾರ್ತಾ ಇಲಾಖೆಯಿಂದ ನಿಯೋಜಿಸಲಾಗಿದ್ದ ವಾಹನ ಇದಾಗಿದ್ದು ವಾರ್ತಾ ಇಲಾಖೆಯಲ್ಲಿ ವಾಹನ ಇಲ್ಲದೆ ಆರೋಗ್ಯ ಇಲಾಖೆಯಿಂದ ವಾಹನ ನೀಡಲಾಗಿತ್ತು. ಸಕಲೇಶಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ರ ಬಳಿ ಈ ಘಟನೆ ನಡೆದಿದ್ದು, ಏಳು ಜನ ಪತ್ರಕರ್ತರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪತ್ರಕರ್ತರು ಪಾರಾಗಿದ್ದಾರೆ.
ಕಳೆದ ಅನೇಕ ದಿನಗಳಿಂದ ವಾರ್ತಾ ಇಲಾಖೆಗೆ ವಾಹನಗಳು ಇಲ್ಲದೆ ಈ ಹಿಂದೆ ಸಿ.ಎಂ ಸಚಿವರು ಸೇರಿ ಹಲವರಿಗೆ ಮನವಿ ಸಲ್ಲಿಸಿದರೂ ಈ ವರೆಗೆ ವಾಹನ ನೀಡಲು ಸರ್ಕಾರ ಮುಂದಾಗಿಲ್ಲ, ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಪತ್ರಕರ್ತರು ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.