ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಜಾರಿ ನಿರ್ದೇಶನಾಲಯ (ED) ನಡೆಸಿದ ಏಕಕಾಲದ ದಾಳಿಗಳು ಭಾರೀ ಸಂಚಲನ ಮೂಡಿಸಿವೆ. ಜಿಲ್ಲಾ ಬಿಜು ಜನತಾದಳ (BJD) ಉಪಾಧ್ಯಕ್ಷ ಹಾಗೂ ಗುತ್ತಿಗೆದಾರ ಹೃಷಿಕೇಶ್ ಪಧಿ ಅವರ ನಿವಾಸ ಸೇರಿದಂತೆ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದ ಇಡಿ ಅಧಿಕಾರಿಗಳಿಗೆ ಅಪಾರ ಪ್ರಮಾಣದ ನಗದು ದೊರೆತಿದೆ.
ಶೋಧ ಕಾರ್ಯಾಚರಣೆ ವೇಳೆ ಮನೆಗಳ ಕಪಾಟುಗಳಲ್ಲಿ ನೋಟುಗಳ ಬಂಡಲ್‌ಗಳು ತುಂಬಿರುವುದು ಕಂಡುಬಂದಿದ್ದು, ಇಷ್ಟು ದೊಡ್ಡ ಮೊತ್ತದ ನಗದು ಪತ್ತೆಯಾಗಿರುವುದರಿಂದ ಇಡಿ ಅಧಿಕಾರಿಗಳೇ ಅಚ್ಚರಿಗೊಳಗಾದರು ಎಂದು ಮೂಲಗಳು ತಿಳಿಸಿವೆ. ಈ ಕಾರ್ಯಾಚರಣೆ ಗಂಜಾಂ ಜಿಲ್ಲೆಯಾದ್ಯಂತ ಸುಮಾರು 20 ಸ್ಥಳಗಳಲ್ಲಿ ಒಂದೇ ಸಮಯದಲ್ಲಿ ನಡೆದಿದೆ.
ಹೃಷಿಕೇಶ್ ಪಧಿ ಅವರ ಸಂಪರ್ಕದ ಆಧಾರದ ಮೇಲೆ, ಇಡಿ ತಂಡಗಳು ಬೆರ್ಹಾಂಪುರ ನಗರದ ಬಿಜಿಪುರ, ಲಂಜಿಪಲ್ಲಿ, ಜಯಪ್ರಕಾಶ್ ನಗರ, ಹೊಸ ಬಸ್ ನಿಲ್ದಾಣದ ಸುತ್ತಮುತ್ತ ಸೇರಿದಂತೆ ಹಲವು ಉದ್ಯಮಿಗಳು ಮತ್ತು ಗುತ್ತಿಗೆದಾರರ ನಿವಾಸಗಳನ್ನೂ ಶೋಧಿಸಿವೆ. ತೆರಿಗೆ ವಂಚನೆ ಹಾಗೂ ಆರ್ಥಿಕ ಅಕ್ರಮಗಳಿಗೆ ಸಂಬಂಧಿಸಿದಂತೆ ಈ ದಾಳಿಗಳು ನಡೆದಿವೆ ಎನ್ನಲಾಗಿದೆ.
ಆದರೆ, ವಶಪಡಿಸಿಕೊಂಡ ನಗದು ಯಾವ ಮೂಲದಿಂದ ಬಂದಿದೆ ಎಂಬ ಬಗ್ಗೆ ಜಾರಿ ನಿರ್ದೇಶನಾಲಯ ಇನ್ನೂ ಅಧಿಕೃತವಾಗಿ ಸ್ಪಷ್ಟನೆ ನೀಡಿಲ್ಲ. ತನಿಖೆ ಮುಂದುವರಿದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.


