ಹೊಸದಿಗಂತ ಡಿಜಿಟಲ್ ಡೆಸ್ಕ್:
ಅತ್ಯಾಚಾರ ಪ್ರಕರಣಗಳಿಗೆ ಮಹಿಳೆಯರ ಸೌಂದರ್ಯವೇ ಕಾರಣ ಎಂದು ನಾಲಗೆ ಹರಿಯಬಿಡುವ ಮೂಲಕ ಕಾಂಗ್ರೆಸ್ ಶಾಸಕ ಹೊಸದೊಂದು ವಿವಾದ ಹುಟ್ಟು ಹಾಕಿದ್ದಾರೆ.
ಮಧ್ಯ ಪ್ರದೇಶದ ಕಾಂಗ್ರೆಸ್ ಶಾಸಕ ಫೂಲ್ ಸಿಂಗ್ ಬರೈಯ ಈ ರೀತಿಯ ಹೇಳಿಕೆ ಕೊಟ್ಟು ಮಹಿಳೆಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸದ್ಯ ಅವರ ಈ ಹೇಳಿಕೆ ರಾಜಕೀಯವಾಗಿ ಭಾರಿ ಸಂಚಲನ ಮೂಡಿಸಿದ್ದು, ದೇಶಾದ್ಯಂತ ತೀವ್ರ ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
ಒಬ್ಬ ಪುರುಷನು ರಸ್ತೆಯಲ್ಲಿ ಹೋಗುವಾಗ ಸುಂದರವಾದ ಹುಡುಗಿಯನ್ನು ನೋಡಿದರೆ ಅವನ ಮನಸ್ಸು ಚಂಚಲಗೊಂಡು ದಾರಿ ತಪ್ಪುತ್ತದೆ ಮತ್ತು ಇದು ಅತ್ಯಾಚಾರಕ್ಕೆ ಪ್ರೇರೇಪಣೆ ನೀಡುತ್ತದೆ ಎಂದು ಹೇಳಿದ್ದಾರೆ. ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಬರೈಯ ಈ ಅಸಂಬದ್ಧ ಹೇಳಿಕೆ ನೀಡಿದ್ದಾರೆ. ಅತ್ಯಾಚಾರಕ್ಕೆ ಜಾತಿ ಮತ್ತು ಧಾರ್ಮಿಕ ವ್ಯಾಖ್ಯಾನವನ್ನೂ ಅವರು ನೀಡಿದ್ದಾರೆ.
ವ್ಯಕ್ತಿಗಳಿಗಿಂತ ಹೆಚ್ಚಾಗಿ ಗುಂಪುಗಳಿಂದಲೇ ಅತ್ಯಾಚಾರ ನಡೆಯುತ್ತದೆ ಎಂದು ಬರೈಯ ಹೇಳಿದ್ದಾರೆ. ಶಿಶುಗಳ ಮೇಲೂ ನಡೆಯುವ ಇಂತಹ ಅಪರಾಧವನ್ನು ಅವರು ಖಂಡಿಸಿದ್ದಾರೆ. ಭಾರತದಲ್ಲಿ ಅತ್ಯಾಚಾರಕ್ಕೆ ಹೆಚ್ಚು ಬಲಿಯಾಗುವವರು ಯಾರು? ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಒಬಿಸಿ ಸಮುದಾಯಕ್ಕೆ ಸೇರಿದವರು. ಅತ್ಯಾಚಾರದ ಸಿದ್ಧಾಂತವೆಂದರೆ ಒಬ್ಬ ಪುರುಷ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಸುಂದರ ಹುಡುಗಿಯನ್ನು ನೋಡಿದರೆ ಅದು ಅವನ ಮನಸ್ಸನ್ನು ಬೇರೆಡೆಗೆ ತಿರುಗಬಹುದು ಮತ್ತು ಅತ್ಯಾಚಾರ ಎಸಗುವಂತೆ ಮಾಡಬಹುದು ಎಂದು ಅವರು ಹೇಳಿದ್ದಾರೆ.
ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳಿಗೆ ಸೇರಿದ ಮಹಿಳೆಯರು ಸುಂದರವಾಗಿಲ್ಲದಿದ್ದರೂ ಪುರಾತನ ಧರ್ಮಗ್ರಂಥಗಳಲ್ಲಿ ಬರೆದಿರುವುದರಿಂದ ಅವರ ಮೇಲೆ ಅತ್ಯಾಚಾರವಾಗುತ್ತದೆ ಎಂದು ಬರೈಯ ತಿಳಿಸಿದ್ದಾರೆ.


