ಹೊಸದಿಗಂತ ಡಿಜಿಟಲ್ ಡೆಸ್ಕ್:
ಖಲಿಸ್ತಾನಿ ಉಗ್ರ ಗುರುಪಂತ್‍ವಂತ್ ಪನ್ನುನ್ ಹತ್ಯೆಯ ಸಂಚಿನ ಆರೋಪ ಹೊರಿಸಿ ಅಮೆರಿಕ ನ್ಯಾಯಾಲಯವು ಭಾರತ ಸರ್ಕಾರಕ್ಕೆ ಸಮನ್ಸ್ ನೀಡಿದ ವಿಚಾರಕ್ಕೆ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಪ್ರತಿಕ್ರಿಯೆ ನೀಡಿದ್ದಾರೆ.
ನಾವು ಮೊದಲೇ ಹೇಳಿದಂತೆ, ಇವು ಸಂಪೂರ್ಣವಾಗಿ ಅನಗತ್ಯ ಮತ್ತು ಆಧಾರ ರಹಿತ ಆರೋಪಗಳಾಗಿವೆ. ಈ ಆರೋಪದ ಮೇಲೆ ನಮ್ಮ ದೃಷ್ಟಿಕೋನವನ್ನು ಬದಲಾಯಿಸುವುದಿಲ್ಲ. ಈ ನಿರ್ದಿಷ್ಟ ಪ್ರಕರಣದ ಹಿಂದಿರುವ ವ್ಯಕ್ತಿಯ ಪೂರ್ವಾಪರಗಳು ಚೆನ್ನಾಗಿ ತಿಳಿದಿವೆ ಎಂದು ಹೇಳಿದ್ದಾರೆ.
1967 ರ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆಯಡಿ, ದೇಶವಿರೋಧಿ ಮತ್ತು ಅದರಲ್ಲಿ ತೊಡಗಿರುವ ಪನ್ನುನ್ ಪ್ರತಿನಿಧಿಸುವ ಸಂಸ್ಥೆಯನ್ನು ಕಾನೂನುಬಾಹಿರ ಸಂಸ್ಥೆ ಎಂದು ಘೋಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ನ್ಯೂಯಾರ್ಕ್‍ನ ಸದರ್ನ್‍ನ ಜಿಲ್ಲಾ ನ್ಯಾಯಾಲಯವು ಸಮನ್ಸ್‌ನಲ್ಲಿ ಭಾರತ ಸರ್ಕಾರ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಭಾರತದ ಗುಪ್ತಚರ ಸಂಸ್ಥೆಯ ಮಾಜಿ ಮುಖ್ಯಸ್ಥ ಸಮಂತ್ ಗೋಯೆಲ್, ಏಜೆಂಟ್ ವಿಕ್ರಮ್ ಯಾದವ್ ಮತ್ತು ಭಾರತೀಯ ಉದ್ಯಮಿ ನಿಖಿಲ್ ಗುಪ್ತಾ ಅವರನ್ನು ಹೆಸರಿಸಿತ್ತು. ಅಲ್ಲದೇ ಸಮನ್ಸ್‍ನಲ್ಲಿ ಹೆಸರಿಸಿದವರು 21 ದಿನಗಳಲ್ಲಿ ಉತ್ತರಿಸುವಂತೆ ನ್ಯಾಯಾಲಯ ಸೂಚಿಸಿತ್ತು.