ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಪತಿ ಲಡ್ಡು ವಿವಾದದ ಕುರಿತು ಮಾತನಾಡಿದ್ದ ತಮಿಳು ನಟ ಕಾರ್ತಿ, ಆಂಧ್ರ ಉಪ ಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ರನ್ನು ಉಲ್ಲೇಖಿಸಿ ಕ್ಷಮೆಯಾಚಿಸಿದ್ದಾರೆ.
ತಿರುಪತಿ-ತಿರುಮಲ ಲಡ್ಡು ಪ್ರಸಾದದಲ್ಲಿ ಕಲಬೆರಕೆ ವಿಚಾರ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಲಡ್ಡು ವಿಚಾರವಾಗಿ ಕಾರ್ತಿ ಕೂಡ ಸಿನಿಮಾವೊಂದರ ಕಾರ್ಯಕ್ರಮದಲ್ಲಿ ಲಅದು ಸೆನ್ಸಿಟಿವ್ ವಿಚಾರ ಅದರ ಬಗ್ಗೆ ಮಾತನಾಡುವುದು ಬೇಡ ಎಂದು ಅಪಹಾಸ್ಯ ಮಾಡಿದ್ದರು.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಪವನ್ ಕಲ್ಯಾಣ್ , ತಿರುಪತಿಯ ಪವಿತ್ರ ಲಡ್ಡು ವಿಚಾರದಲ್ಲಿ ಅಪಹಾಸ್ಯ ಮಾಡಬಾರದು. ನಾವು ನಿಮ್ಮನ್ನು ಕಲಾವಿದರಾಗಿ ಗೌರವಿಸುತ್ತೇವೆ. ಆದರೆ ಮುಖ್ಯವಾಗಿ ಸನಾತನ ಧರ್ಮದ ಬಗ್ಗೆ ಒಂದೇ ಒಂದು ಅಕ್ಷರ ಮಾತನಾಡುವ ಮುನ್ನ ನೂರು ಬಾರಿ ಯೋಚಿಸಿ ಎಂದು ಖಾರವಾಗಿ ಹೇಳಿದ್ದರು.
ಈ ವಿಚಾರ ವೈರಲ್ ಆಗುತ್ತಲ್ಲೇ ಎಚ್ಚೆತ್ತುಕೊಂಡಿರುವ ನಟ ಕಾರ್ತಿ ಕ್ಷಮೆ ಯಾಚಿಸಿದ್ದಾರೆ. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾರ್ತಿ, ‘ಆತ್ಮೀಯ ಪವನ್ ಕಲ್ಯಾಣ್ ಸರ್.. ನಿಮ್ಮ ಬಗ್ಗೆ ನಮಗೆ ತುಂಬಾ ಗೌರವವಿದೆ. ನನ್ನಿಂದ ಉಂಟಾದ ಯಾವುದೇ ಉದ್ದೇಶಪೂರ್ವಕ ತಪ್ಪುಗ್ರಹಿಕೆಗೆ ನಾನು ಕ್ಷಮೆಯಾಚಿಸುತ್ತೇನೆ. ವೆಂಕಟೇಶ್ವರ ಸ್ವಾಮಿಯ ವಿನಮ್ರ ಭಕ್ತನಾಗಿ, ನಾನು ಯಾವಾಗಲೂ ನಮ್ಮ ಸಂಪ್ರದಾಯಗಳನ್ನು ಆತ್ಮೀಯವಾಗಿ ಹಿಡಿದಿಟ್ಟುಕೊಳ್ಳುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ.