ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಸಂಚಾರ ದಟ್ಟಣೆಗೆ ಪರ್ಯಾಯವಾಗಿರುವ ‘ನಮ್ಮ ಮೆಟ್ರೋ’ದ ಹಳದಿ ಮಾರ್ಗದ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಸಂಕ್ರಾಂತಿ ಸಂಭ್ರಮದ ಬೆನ್ನಲ್ಲೇ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಈ ಮಾರ್ಗದಲ್ಲಿ ಸಂಚರಿಸುವ ಎಂಟನೇ ಡ್ರೈವರ್‌ಲೆಸ್ ರೈಲು ಜವರಿ 19ರ ಸೋಮವಾರ ರಾತ್ರಿ ನಗರಕ್ಕೆ ಆಗಮಿಸಲಿದೆ.
ಚೀನಾದಿಂದ ಬಂದಿರುವ ಈ ಎಂಟನೇ ರೈಲು ಸೋಮವಾರ ತಡರಾತ್ರಿ ಇಲೆಕ್ಟ್ರಾನಿಕ್ ಸಿಟಿಯ ಹೆಬ್ಬಗೋಡಿ ಡಿಪೋ ತಲುಪಲಿದೆ. ರೈಲು ಬಂದ ತಕ್ಷಣವೇ ಕಾರ್ಯಾಚರಣೆಗೆ ಇಳಿಯುವುದಿಲ್ಲ. ಬದಲಾಗಿ, ಬಿಎಂಆರ್‌ಸಿಎಲ್ ಅಧಿಕಾರಿಗಳು ಸುರಕ್ಷತಾ ಕ್ರಮವಾಗಿ ವಿವಿಧ ಹಂತದ ತಾಂತ್ರಿಕ ಪರೀಕ್ಷೆಗಳನ್ನು ನಡೆಸಲಿದ್ದಾರೆ. ಈ ಪರೀಕ್ಷೆಗಳು ಯಶಸ್ವಿಯಾದ ನಂತರವೇ ವಾಣಿಜ್ಯ ಸಂಚಾರಕ್ಕೆ ಹಸಿರು ನಿಶಾನೆ ಸಿಗಲಿದೆ.
ಪ್ರಸ್ತುತ ಹಳದಿ ಮಾರ್ಗದಲ್ಲಿ ಪ್ರತಿ 10 ನಿಮಿಷಕ್ಕೆ ಒಂದು ರೈಲು ಸಂಚರಿಸುತ್ತಿದೆ. ಈಗ ಎಂಟನೇ ರೈಲು ಸೇರ್ಪಡೆಗೊಳ್ಳುತ್ತಿರುವುದರಿಂದ, ಮುಂದಿನ ತಿಂಗಳಿನಿಂದ ರೈಲುಗಳ ನಡುವಿನ ಓಡಾಟದ ಸಮಯ ಗಮನಾರ್ಹವಾಗಿ ಕಡಿಮೆಯಾಗಲಿದೆ. ಇದರಿಂದ ಆಫೀಸ್ ಹಾಗೂ ಕಾಲೇಜುಗಳಿಗೆ ಹೋಗುವ ಸಾವಿರಾರು ಪ್ರಯಾಣಿಕರು ಪ್ಲಾಟ್‌ಫಾರ್ಮ್ ಮೇಲೆ ರೈಲಿಗಾಗಿ ಹೆಚ್ಚು ಹೊತ್ತು ಕಾಯುವ ಅಗತ್ಯವಿರುವುದಿಲ್ಲ.
“ಜನರ ಓಡಾಟ ಮತ್ತು ಪ್ರಯಾಣಿಕರ ದಟ್ಟಣೆಯನ್ನು ಆಧರಿಸಿ ರೈಲುಗಳ ಸಂಚಾರದ ಅವಧಿಯನ್ನು ಇನ್ನಷ್ಟು ಕಡಿತಗೊಳಿಸಲಾಗುವುದು” ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟಿನಲ್ಲಿ, ಬೆಂಗಳೂರಿನಾದ್ಯಂತ ತನ್ನ ಜಾಲವನ್ನು ವಿಸ್ತರಿಸುತ್ತಿರುವ ಮೆಟ್ರೋ, ಇದೀಗ ಹಳದಿ ಮಾರ್ಗದ ಪ್ರಯಾಣವನ್ನು ಮತ್ತಷ್ಟು ಸುಗಮಗೊಳಿಸಲು ಸಜ್ಜಾಗಿದೆ.


