ತುಮಕೂರು-ಯಶವಂತಪುರ ಹೊಸ ಮೆಮು ರೈಲು ಲೋಕಾರ್ಪಣೆ, ರೈಲ್ವೆ ಕ್ರಾಂತಿ ಮಾಡಲು ಬದ್ಧ ಎಂದ ಸಚಿವ ಸೋಮಣ್ಣ

ಹೊಸದಿಗಂತ ವರದಿ ತುಮಕೂರು:

ರಾಜ್ಯದಲ್ಲಿ ರೈಲ್ವೆ ಇಲಾಖೆಗೆ ಸಂಬಂಧಪಟ್ಟ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ರೈಲ್ವೆ ಕ್ರಾಂತಿ ಮಾಡಲು ಬದ್ಧವಾಗಿರುವುದಾಗಿ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ತಿಳಿಸಿದರು.

ನಗರದ ರೈಲ್ವೆ ನಿಲ್ದಾಣದಲ್ಲಿ ತುಮಕೂರು-ಯಶವಂತಪುರ ಹೊಸ ಮೆಮು ರೈಲು ಲೋಕಾರ್ಪಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನಿನ್ನು ಇಲಾಖೆಯ ಬಗ್ಗೆ ಬಹಳ ತಿಳಿದುಕೊಳ್ಳಬೇಕಾಗಿದೆ. ಆ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗಿದ್ದೇನೆ. ನನ್ನ ಅವಧಿಯಲ್ಲಿ ರಾಜ್ಯದಲ್ಲಿ ಬಾಕಿ ಉಳಿದಿರುವ, ನೆನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳನ್ನು ಸಂಪೂರ್ಣಗೊಳಿಸುವ ಮೂಲಕ ರೈಲ್ವೆ ಕ್ರಾಂತಿ ಮಾಡುವುದಾಗಿ ಹೇಳಿದರು.

2027ರ ಮಾರ್ಚ್ ಒಳಗೆ ರಾಯದುರ್ಗ-ತುಮಕೂರು, ದಾವಣಗೆರೆ-ತುಮಕೂರು ರೈಲ್ವೆ ಮಾರ್ಗಗಳ ಕಾಮಗಾರಿಯನ್ನು ಪೂರ್ಣಗೊಳಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವ ಅಶ್ವಿನಿವೈಷ್ಣವ್‍ರವರಿಂದ ಲೋಕಾರ್ಪಣೆ ಮಾಡಿಸಲಾಗುವುದು ಎಂದರು.
ಬೆಂಗಳೂರಿಗೆ ಸಬ್‍ಅರ್ಬನ್ ರೈಲು ಸೇವೆ ಒದಗಿಸಲು ಈಗಾಗಲೇ ಸಚಿವರಾದ ಅಶ್ವಿನಿ ವೈಷ್ಣವ್‍ರವರೊಂದಿಗೆ ಚರ್ಚೆ ಮಾಡಿದ್ದು, 2025ರೊಳಗೆ 2 ಹಂತದ ಸಬ್‍ಅರ್ಬನ್ ರೈಲುಗಳನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ಅವರು ಹೇಳಿದರು.

ತುಮಕೂರು-ಅರಸೀಕೆರೆ ಮಾರ್ಗದಲ್ಲಿ 220 ಕೋಟಿ ರೂ. ವೆಚ್ಚದಲ್ಲಿ ಸ್ವಯಂಪ್ರೇರಿತ ಸಿಗ್ನಲ್‍ಗಳನ್ನು ಸಹ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ತುಮಕೂರನ್ನು ಮತ್ತೊಂದು ಬೆಂಗಳೂರನ್ನಾಗಿ ಮಾಡಬೇಕು ಎಂಬ ಆಸೆ ತಮಗಿದೆ. ಹಾಗಾಗಿ ತುಮಕೂರು-ಬೆಂಗಳೂರು ಮಾರ್ಗದಲ್ಲಿರುವ 2 ಪಥದ ರೈಲ್ವೆ ಹಳಿಗಳನ್ನು 4 ಲೈನ್‍ಗಳನ್ನಾಗಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಒಂದೇ ನಾಣ್ಯದ ಎರಡು ಮುಖಗಳಂತೆ ಕೆಲಸ ಮಾಡಿದರೆ ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ರೈಲ್ವೆ ಇಲಾಖೆ ಸೇರಿದಂತೆ ಇನ್ನಿತರೆ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳು ವೇಗ ಪಡೆದುಕೊಳ್ಳುವುದರ ಜತೆಗೆ ಅಭಿವೃದ್ಧಿ ಯೋಜನೆಗಳು ಪ್ರಗತಿ ಕಾಣಲಿವೆ. ಈ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳು ಕಾರ್ಯೋನ್ಮುಖರಾದರೆ ಯಾವುದೇ ಒಂದು ಸಮಸ್ಯೆಯೂ ಜನಪ್ರತಿನಿಧಿಗಳ ಬಳಿಗೆ ಬರುವುದೇ ಇಲ್ಲ ಎಂದರು.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್‍ಬಾಬು, ಶಾಸಕರಾದ ಜಿ.ಬಿ. ಜ್ಯೋತಿಗಣೇಶ್, ಬಿ. ಸುರೇಶ್‍ಗೌಡ, ಎಂ.ಟಿ. ಕೃಷ್ಣಪ್ಪ ಮಾತನಾಡಿದರು.
ಸಮಾರಂಭದಲ್ಲಿ ಮಾಜಿ ಸಂಸದ ಜಿ.ಎಸ್. ಬಸವರಾಜು, ಮಾಜಿ ಶಾಸಕರಾದ ನೆ.ಲ. ನರೇಂದ್ರಬಾಬು, ಹೆಚ್. ನಿಂಗಪ್ಪ, ನೈರುತ್ಯ ರೈಲ್ವೆ ಇಲಾಖೆಯ ಡಿಆರ್‍ಎಂ ಯೋಗೀಶ್ ಮೋಹನ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!