ಎಷ್ಟೇ ತೊಡಕುಗಳು ಎದುರಾದರೂ 5 ವರ್ಷಗಳ ಕಾಲ ನಾವು ಆಡಳಿತ ಮಾಡಿಯೇ ಮಾಡುತ್ತೇವೆ: ಸಿಎಂ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

5 ವರ್ಷಗಳ ಕಾಲ ರಾಜ್ಯದ ಜನತೆ ನಮಗೆ ಅವಕಾಶ ಕೊಟ್ಟಿದ್ದಾರೆ. ಈಗಲೂ ಎಷ್ಟೇ ತೊಡಕುಗಳು ಎದುರಾದರೂ, ತಾಯಿ ಚಾಮುಂಡೇಶ್ವರಿ ಆಶೀರ್ವಾದ ನಮ್ಮ ಮೇಲಿದೆ. ಐದು ವರ್ಷಗಳ ಕಾಲ ನಾವು ಆಡಳಿತ ಮಾಡಿಯೇ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಇಂದುಮೈಸೂರಿನಲ್ಲಿ ನಾಡಹಬ್ಬದಸರಾ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕೇವಲ ರಂಗು ರಂಗಿನ ಮಾತಿನ ಮೂಲಕ ಜನರ ಹೊಟ್ಟೆ ತುಂಬಿಸಲು ಸಾಧ್ಯವಿಲ್ಲ. ಆದ್ದರಿಂದಲೇ ಚುನಾವಣೆ ಸಂದರ್ಭದಲ್ಲಿ ಕೊಟ್ಟ ಭರವಸೆಯಂತೆ ಜನಪರ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಸಾಮಾಜಿಕ ಮತ್ತು ಆರ್ಥಿಕ ಶಕ್ತಿಯನ್ನು ತುಂಬುವ ಕಾರ್ಯವನ್ನು ಮಾಡುತ್ತಿದ್ದೇವೆ.ಚುನಾವಣಾ ಸಂದರ್ಭದಲ್ಲಿ ತಾಯಿ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ನಾನು ಮತ್ತು ಡಿ.ಕೆ.ಶಿವಕುಮಾರ್‌ ಅವರು ಚುನಾವಣೆಯಲ್ಲಿ ಜಯ ಗಳಿಸಿದರೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಭರವಸೆ ನೀಡಿದ್ದೆವು. ಅದರಂತೆ ಚುನಾವಣೆಯಲ್ಲಿ ಜಯ ಗಳಿಸಿದ ಎಂಟೇ ತಿಂಗಳಲ್ಲಿ ಎಲ್ಲಾ 5 ಯೋಜನೆಗಳನ್ನು ಜಾರಿಗೊಳಿಸಿದ್ದೇವೆ ಎಂದರು.

ಈ ಗ್ಯಾರಂಟಿ ಯೋಜನೆಗಳ ಮೂಲಕ ಸಂವಿಧಾನದ ಆಶಯದಂತೆ ದುರ್ಬಲ ವರ್ಗದವರಿಗೆ ಆರ್ಥಿಕ ಮತ್ತು ಸಾಮಾಜಿಕವಾಗಿ ಶಕ್ತಿ ತುಂಬುವ ಕಾರ್ಯವನ್ನು ಮಾಡುತ್ತಿದ್ದೇವೆ. ಪಂಚ ಗ್ಯಾರಂಟಿಗಳಿಂದ ಪ್ರತಿ ಫಲಾನುಭವಿ ಕುಟುಂಬಕ್ಕೆ ವಾರ್ಷಿಕ 40 ರಿಂದ 50 ಸಾವಿರ ರೂಪಾಯಿ ಆರ್ಥಿಕ ನೆರವು ದೊರೆಯುತ್ತಿದೆ.ಗೃಹಲಕ್ಷ್ಮಿ ಯೋಜನೆಯಡಿ 1.21 ಕೋಟಿ ಕುಟುಂಬಗಳ ಯಜಮಾನಿಯರು ಪ್ರತಿ ತಿಂಗಳು ರೂ.2 ಸಾವಿರ ಪಡೆಯುತ್ತಿದ್ದಾರೆ. ಗೃಹಜ್ಯೋತಿ ಯೋಜನೆಯಡಿ 1.40 ಕುಟುಂಬಗಳು ಉಚಿತ ವಿದ್ಯುತ್‌ ಸೌಲಭ್ಯ ಪಡೆಯುತ್ತಿವೆ. ಯುವ ನಿಧಿ ಯೋಜನೆಯಡಿ 1.82 ಲಕ್ಷ ನಿರುದ್ಯೋಗಿ ಪದವೀಧರರು ಹಾಗೂ ಡಿಪ್ಲೊಮಾದಾರರು ಆರ್ಥಿಕ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

ಈ ಬಾರಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ದಸರಾ ಮಹೋತ್ಸವ ಅದ್ದೂರಿಯಾಗಿ ಮಾಡಲು ಸೂಚನೆ ನೀಡಿದ್ದೇನೆ. ದಸರಾ ನಾಡಹಬ್ಬವಾಗಬೇಕು, ಅಧಿಕಾರಿಗಳ ಹಬ್ಬವಾಗಬಾರದು. ಎಲ್ಲಾ ಕಾರ್ಯಕ್ರಮಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.

ಜನರ ಆಶೀರ್ವಾದದಿಂದ ನಾವು ಆಡಳಿತಕ್ಕೆ ಬಂದಿದ್ದೇವೆ. 5 ವರ್ಷಗಳ ಕಾಲ ರಾಜ್ಯದ ಜನತೆ ನಮಗೆ ಅವಕಾಶ ಕೊಟ್ಟಿದ್ದಾರೆ. ಈಗಲೂ ಎಷ್ಟೇ ತೊಡಕುಗಳು ಎದುರಾದರೂ, ತಾಯಿ ಚಾಮುಂಡೇಶ್ವರಿ ಆಶೀರ್ವಾದ ನಮ್ಮ ಮೇಲಿದೆ. ಐದು ವರ್ಷಗಳ ಕಾಲ ನಾವು ಆಡಳಿತ ಮಾಡಿಯೇ ಮಾಡುತ್ತೇವೆ.‌ಸತ್ಯಕ್ಕೆ ಯಾವತ್ತೂ ಜಯ ದೊರೆಯುತ್ತದೆ. ನಿಮ್ಮೆಲ್ಲರ ಆಶೀರ್ವಾದ, ಈ ರಾಜ್ಯದ ಜನರ ಆಶೀರ್ವಾದ ಈ ಸರ್ಕಾರದ ಮೇಲೆ ಇರುವ ತನಕ ಯಾರಿಗೂ ಏನೂ ಮಾಡಲು ಸಾಧ್ಯವಿಲ್ಲ. ನಾನು ಈ ಕ್ಷೇತ್ರದಲ್ಲಿ ಐದು ಬಾರಿ ಗೆದ್ದಿದ್ದೇನೆ. ಮೂರು ಬಾರಿ ಸೋತಿದ್ದೇನೆ.ಚಾಮುಂಡೇಶ್ವರಿ ತಾಯಿ ಹಾಗೂ ಇಲ್ಲಿನ ಜನರ ಆಶೀರ್ವಾದದಿಂದಲೇ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ಇಲ್ಲಿಯವರೆಗೆ ಯಾವುದೇ ತಪ್ಪು ಮಾಡಿಲ್ಲ. ತಪ್ಪು ಮಾಡಿದ್ರೆ ಇಷ್ಟು ದೀರ್ಘಕಾಲ ರಾಜಕಾರಣದಲ್ಲಿ ಇರಲು ಸಾಧ್ಯವಿರಲಿಲ್ಲ.ನನಗೆ ನ್ಯಾಯಾಲಯಗಳಲ್ಲಿ ನಂಬಿಕೆಯಿದೆ. ಆತ್ಮಸಾಕ್ಷಿಗೆ ಅನುಗುಣವಾಗಿ ನಡೆಯುವ ಪ್ರಯತ್ನ ಮಾಡುತ್ತಿದ್ದೇವೆ. ಗಾಂಧೀಜಿ ಅವರು ಹೇಳಿದಂತೆ ಆತ್ಮಸಾಕ್ಷಿಯ ನ್ಯಾಯಾಲಯ ಎಲ್ಲಾ ನ್ಯಾಯಾಲಯಗಳಿಗಿಂತ ಮಿಗಿಲಾದುದು. ಆತ್ಮಸಾಕ್ಷಿಗೆ ತಕ್ಕಂತೆ ನಡೆದಿದ್ದೇನೆ ಎಂಬ ದೃಢ ನಂಬಿಕೆ ಇದೆ.ಪರಸ್ಪರರನ್ನು ಪ್ರೀತಿಸಬೇಕೆ ಹೊರತು ಯಾರನ್ನೂ ದ್ವೇಷಿಸಬಾರದು. ಎಲ್ಲಾ ಧರ್ಮಗಳು ಪರಸ್ಪರ ಪ್ರೀತಿಸಿ ಮಾನವರಾಗಿ ಬಾಳುವ ಸಂದೇಶವನ್ನು ನೀಡಿವೆ ಎಂದು ಅವರು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!