ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಭರ್ತಿಯಾಗದ ಹುದ್ದೆಗಳು: ರಾಜ್ಯ ಸರ್ಕಾರಕ್ಕೆ ಮಾಲಿನ್ಯ ನಿಯಂತ್ರಣದ ಕುರಿತು ನಿರ್ಲಕ್ಷ್ಯ

ಹೊಸದಿಗಂತ ವರದಿ, ಬೆಂಗಳೂರು:

  • ವರದಿ: ನಂದಿನಿ ಎನ್.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಸರ್ಕಾರ ಅನುಮತಿ ನೀಡಿದ್ದರೂ ಯಾವುದೇ ಮಾಹಿತಿಯಾಗಲಿ, ಪರೀಕ್ಷೆಗೆ ಅರ್ಜಿಗೆ ಕರೆಯಾಗಲಿ ಈವರೆಗೂ ನಿಗಧಿಯಾಗದ ಕಾರಣ ಆಕಾಂಕ್ಷಿಗಳಿಗೆ ಸರ್ಕಾರದ ಈ ಭರವಸೆಯಿಂದ ಕಂಗಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಮಂಡಳಿಯಲ್ಲಿ ಅಧಿಕಾರಿಗಳು, ಸಿಬ್ಬಂದಿ ಕೊರತೆಯಿಂದಾಗಿ ಹಲ್ಲಿಲ್ಲದ ಹಾವಿನಂತಾಗಿದೆ.

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಮಾಲಿನ್ಯ ನಿಯಂತ್ರಣ – ಮಂಡಳಿಗೆ ಶಕ್ತಿ ತುಂಬಲು 152 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುವುದು ಎಂದು 2024ರ ಮಾ.13ರಂದು ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದರು. ಆದರೆ, ಕಳೆದ 6.5 ತಿಂಗಳಿನಿಂದ ನೇರ ನೇಮಕಾತಿ ಪ್ರಕ್ರಿಯೆಗೆ ದಿನಾಂಕ ಮತ್ತು ಅಧಿಸೂಚನೆಗಳೇ ಹೊರಡಿಸಿಲ್ಲದಿರುವುದು ಆಕಾಂಕ್ಷಿಗಳಿಗೆ ಬೇಸರವನ್ನುಂಟು ಮಾಡಿದೆ.

ಈ ಖಾಲಿ ಹುದ್ದೆ ತುಂಬಿದ್ದಲ್ಲಿ, ಮಾಲಿನ್ಯ ನಿಯಂತ್ರಣ ಮಂಡಳಿಗೆ ಮತ್ತಷ್ಟು ಅಧಿಕಾರಿಗಳ ಬಲ ಸಿಗಲಿದ್ದು, ರಾಜ್ಯದಲ್ಲಿನ ಮಾಲಿನ್ಯ ತಡೆಗಟ್ಟಲು ಸೂಕ್ತ ನಿಯಮಗಳನ್ನು ಪಾಲಿಸುವುದರ ಜತೆಗೆ ಕೆಲ ಯೋಜನೆಗಳು ಹಾಗೂ ಮಹತ್ತರ ತೀರ್ಮಾನಗಳೊಂದಿಗೆ ಆದಷ್ಟು ಮಾಲಿನ್ಯ ನಿಯಂತ್ರಣವಾಗುತ್ತಿತ್ತು. ಆದರೆ, ಇದು ಸಾಧ್ಯವಾಗುತ್ತಿಲ್ಲ. ಸಚಿವರೇ ಖುದ್ದಾಗಿ ಹುದ್ದೆಗಳನ್ನು ಶೀಘ್ರದಲ್ಲಿ ಭರ್ತಿ ಮಾಡಲು ತಿಳಿಸಿದರೂ, ಇದುವರೆಗೆ ಯಾವುದೇ ಮಾಹಿತಿ ಹೊರ ಬಂದಿಲ್ಲದಿರುವುದು ಪರಿಸರ ಮತ್ತು ಮಾಲಿನ್ಯ ನಿಯಂತ್ರಣಾ ಮಂಡಳಿಯ ಹಿರಿಯ ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರಕ್ಕೆ ಮಾಲಿನ್ಯ ನಿಯಂತ್ರಣದ ಕುರಿತು ನಿರ್ಲಕ್ಷ್ಯ ಧೋರಣೆ ಎತ್ತಿ ತೋರುತ್ತಿದೆ.

14 ವರ್ಷಗಳ ಹಿಂದೆಯೇ ಅಧಿಸೂಚನೆ:
ಮಂಡಳಿಗೆ ಮಂಜೂರಾಗಿರುವ 253 ಹುದ್ದೆಗಳ ಪೈಕಿ 152 ಹುದ್ದೆಗಳು ತಾಂತ್ರಿಕ, ಪ್ರಯೋಗಶಾಲೆ ಮತ್ತು ಆಡಳಿತ ವಿಭಾಗಗಳಲ್ಲಿ ಖಾಲಿ ಇದ್ದು, ಈ ಹಿಂದೆ ಮಂಡಳಿಯ 153 ಖಾಲಿ ಹುದ್ದೆಗಳ ಭರ್ತಿಗೆ 2010ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಕಾರಣಾಂತರಗಳಿಂದ ಹಲವು ಹುದ್ದೆಗಳು ಭರ್ತಿ ಆಗದೆ ಹಾಗೆ ಉಳಿದಿವೆ ಈ ಹುದ್ದೆಗಳೂ ಸೇರಿದಂತೆ ಪ್ರಸ್ತುತ ಮಂಡಳಿಯಲ್ಲಿ ರಾಜ್ಯ ವ್ಯಾಪಿ ಸ್ಥಳೀಯ ವೃಂದದ ಅಡಿಯಲ್ಲಿ ಖಾಲಿಯಿರುವ ಹುದ್ದೆಗಳ ಪೈಕಿ ಬಹುತೇಕ ಕ್ರಮ ಕೈಗೊಳ್ಳಲು ಮಂಡಳಿಯಲ್ಲಿ ನಿಗಧಿಯಾಗಿತ್ತು.

ರಾಜ್ಯವ್ಯಾಪಿ ಉಳಿಕೆ ವೃಂದದ 146 ಮತ್ತು ರಾಜ್ಯ ವ್ಯಾಪಿ ಸ್ಥಳೀಯ ವೃಂದದ 6 ಸೇರಿ 152 ಹುದ್ದೆಗಳ ಭರ್ತಿಗೆ ನೇರ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲು ಸರ್ಕಾರ ಈಗಾಗಲೇ ಅನುಮತಿಸಿದೆ. ಈ ಕುರಿತು ಶೀಘ್ರದಲ್ಲೇ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗುವುದು ಎಂದುಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರಖಂಡ್ರೆ ತಿಳಿಸಿದ್ದಾರೆ.

ಎಷ್ಟು ಹುದ್ದೆಗಳು?:
ಮಂಡಳಿಯಲ್ಲಿ ಒಟ್ಟಾರೆ ಖಾಲಿಯಿರುವ ಒಟ್ಟು 253 ಹುದ್ದೆಗಳ ಪೈಕಿ ಸರ್ಕಾರದಿಂದ ಅನುಮತಿಸಿರುವ ಒಟ್ಟು 152 ಹುದ್ದೆಗಳನ್ನು ಭರ್ತಿ ಮಾಡಿದ್ದಲ್ಲಿ, ಶೇ. 60ರಷ್ಟು ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿದಂತಾಗುತ್ತದೆ. ಇದರೊಂದಿಗೆ ಉಳಿದ 23 ಹುದ್ದೆಗಳನ್ನು ಬ್ಯಾಕ್‌ಲಾಗ್ ಎಂದು ಪರಿಗಣಿಸಿದ್ದಲ್ಲಿ, ಈಗಿರುವ 152 ಹುದ್ದೆಗಳೊಂದಿಗೆ 23 ಹುದ್ದೆಗಳು ಕೂಡ ಸೇರಿಸಿ ಒಟ್ಟು 175 ಹುದ್ದೆಗಳನ್ನು ಭರ್ತಿ ಮಾಡಿದಾಗ, ಶೇ.69ರಷ್ಟು ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿದಂತಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!