ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ದ ಭಾಷಣಕ್ಕೆ ಸಂಬಂಧಿಸಿದಂತೆ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿದೆ.
ರಾಯಚೂರು ಜಿಲ್ಲೆಯ ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದ ಹಿನ್ನೆಲೆ ರಾಯಚೂರಿನ 1 ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಿಂದ ಇಂದು ನಿರೀಕ್ಷಣಾ ಜಾಮೀನು ನೀಡಲಾಗಿದೆ.
18 ಜನವರಿ 2024 ರಂದು ರಾಯಚೂರು ಜಿಲ್ಲೆಯ ಸಿರವಾರದಲ್ಲಿ ನಮೋ ಬ್ರಿಗೇಡ್ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ಭಾಷಣ ಮಾಡಿದ್ದರು. ಈ ವೇಳೆ ಭಾಷಣದಲ್ಲಿ ಕಲಬುರ್ಗಿ ಇಎಸ್‌ಐ ಆಸ್ಪತ್ರೆ ವಿಚಾರವಾಗಿ ಮಾತನಾಡಿದ್ದು, ಮಲ್ಲಿಕಾರ್ಜುನ ಖರ್ಗೆ ವಿರುದ್ದ ಅವಮಾನಕರ ಹೇಳಿಕೆ ಆರೋಪ ಮಾಡಲಾಗಿತ್ತು.
ಕಲಬುರ್ಗಿಯ ಕಾಂಗ್ರೆಸ್ ಮುಖಂಡ ನೀಡಿದ ದೂರು ಆಧರಿಸಿ ಜನವರಿ 20 ರಂದು ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆ ಮೂಲಕ ಎಫ್ಐಆರ್ನಲ್ಲಿ ಜಾತಿನಿಂದನೆ ಆರೋಪ ಮಾಡಲಾಗಿತ್ತು. ಆದರೆ ಕಲಬುರ್ಗಿ ಹೈಕೋರ್ಟ್ ಜಾತಿನಿಂದನೆ ಆರೋಪದ ಎಫ್‌ಐಆರ್ ರದ್ದುಗೊಳಿಸಿತ್ತು.
ಬಳಿಕ ಚಕ್ರವರ್ತಿ ಸೂಲಿಬೆಲೆ ಅಪಮಾನಕರ ಭಾಷಣ, ದ್ವೇಷ ಭಾಷಣ ಪ್ರಕರಣ ಎದುರಿಸುತ್ತಿದ್ದರು. ಈ ವಿಚಾರವಾಗಿ ಇಂದು ಕೋರ್ಟ್ನಿಂದ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿದೆ.