RCB ಟಿ20 ಆಡೋಕೆ ಮಾತ್ರ, ನಾನು ಟೆಸ್ಟ್ ಮ್ಯಾಚ್ ಆಡೋಕೆ ಬಂದವನು: ವಿಜಯೇಂದ್ರ

 ಹೊಸ ದಿಗಂತ ವರದಿ,ಹುಬ್ಬಳ್ಳಿ:

ಸಿದ್ದರಾಮಯ್ಯ ಅವರು ಐದು ವರ್ಷ ಪೂರೈಸಲಿದ್ದಾರೆ ಹಾಗೂ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯೂವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿಕೆ ನೀಡುವವರೇ ಮುಖಮಂತ್ರಿ ಸ್ಥಾನದ ಜಪ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ವ್ಯಂಗ್ಯವಾಡಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸತೀಶ ಜಾರಕಿಹೊಳಿ ಅವರು ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಯುವುದು ೩ ವರ್ಷವೋ ಅಥವಾ ೫ ವರ್ಷವೋ ಎಂಬುವುದು ಹೈಕಮಾಂಡ್ ನಿರ್ಧರಿಸಲಿದೆ ಎಂದು ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಸಭೆ ಮೇಲೆ ಗೌಪ್ಯ ಸಭೆ ನಡೆಸುತ್ತಿದ್ದಾರೆ ಎಂದರು.

ಅಷ್ಟೇ ಅಲ್ಲದೇ ಸಿದ್ದರಾಮಯ್ಯ ಅವರು ಸೂಚಿಸಿದ ವ್ಯಕ್ತಿ ಸಿಎಂ ಆಗಬಹುದು ಎಂದು ಕಾಂಗ್ರೆಸ್ ಕೆಲವು ನಾಯಕರು ತಿಳಿದಿದ್ದು, ಅವರನ್ನು ಓಲೈಸುವ ನಾಟಕವಾಡುತ್ತಿದ್ದಾರೆ. ಇನ್ನೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸಿಎಂ ಸ್ಥಾನದ ವೇಟಿಂಗ್ ಲಿಸ್ಟ್‌ನ ಮೊದಲ ಸ್ಥಾನದಲ್ಲಿದ್ದು, ಅವರ ಜೊತೆಗೆ ಪ್ರತಿದಿನವೂ ಸಿಎಂ ಸ್ಥಾನಕ್ಕೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಕುಟುಕಿದರು.

ಹಗರಣಗಳ ಸರಮಾಲೆಯಲ್ಲಿ ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನೂ ಭಂಡ ತನ ಬಿಡುತ್ತಿಲ್ಲ. ತಮ್ಮ ಸ್ಥಾನ ಉಳಿಸಿಕೊಳ್ಳಲು ಜಾತಿ ಗಣತಿ ಮುನ್ನೆಲೆ ತಂದಿದ್ದಾರೆ. ಹಿಂದುಳಿದವರ ಬಗ್ಗೆ ಕಾಳಜಿ ಇದ್ದ ಅವರು ಒಂದು ವರ್ಷ ಏಕೆ ಸುಮ್ಮನಿದ್ದರು ಎಂದು ಪ್ರಶ್ನಿಸಿದರು.

ಜಾತಿಗಣತಿ ವಿಚಾರವಾಗಿ ಕಾಂಗ್ರೆಸ್ ನಾಯಕರಲ್ಲಿ ಮನಸ್ಥಾಪಗಳಿವೆ. ಹಿರಿಯ ಮುಖಂಡ ಶ್ಯಾಮನೂರ ಶಿವಶಂಕರಪ್ಪ ವರದಿಯನ್ನು ಅವೈಜ್ಞಾನಿಕ ಎಂದು ಹೇಳಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಹ ಇದಕ್ಕೆ ಸಹಮತ ವ್ಯಕ್ತಪಡಿಸಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಕುರಿತು ಎಲ್ಲ ರಾಜ್ಯಗಳಲ್ಲೂ ತೀರ್ಮಾನ ಆಗಬೇಕು ಎಂದು ಹೇಳಿದರು.

ಕೆ.ಎಸ್. ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ಪಕ್ಷ ಬಿಟ್ಟು ಹೊರಗೆ ಹೋದವರಿಗೆ ನಮ್ಮ ಪಕ್ಷದ ಬಗ್ಗೆ ಮಾತಾನಾಡುವ ನೈತಿಕತೆ ಇಲ್ಲ. ಲೋಕಸಭೆ ಚುನಾವಣೆಯ ವೇಳೆ ಕೆಲವರನ್ನು ಪಕ್ಷದಿಂದ ಹೊರ ಹಾಕಿ ಪಕ್ಷವನ್ನು ಶುದ್ಧೀಕರಿಸಿದ್ದೇವೆ. ಆರ್‌ಸಿಬಿ ಸಂಘಟನೆ ಎಂಬುದು ೨೦-೨೦ ಮ್ಯಾಚ್‌ಗೆ ಸಂಬಂಧಿಸಿದ್ದು. ನಾನು ಇಲ್ಲಿ ಟೆಸ್ಟ್ ಮ್ಯಾಚ್ ಆಡಲು ಬಂದಿದ್ದೇನೆ. ಲಂಬಿ ರೇಸ್ ಕಾ ಗೋಢಾ ಹುಂ.. ಈಶ್ವರಪ್ಪ ಅವರ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!