ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ರಾಜ್ಯಾದ್ಯಂತ ಪ್ರತಿಭಟನ : ಸಂಸದ ಕಾರಜೋಳ

ಹೊಸ ದಿಗಂತ ವರದಿ,ಚಿತ್ರದುರ್ಗ:

ಸುಪ್ರಿಂಕೋರ್ಟ್ ತೀರ್ಪಿನಂತೆ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸುವಂತೆ ಒತ್ತಾಯಿಸಿ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಹೋರಾಟ ನಡೆಸಲಾಗುವುದೆಂದು ಸಂಸದ ಗೋವಿಂದ ಕಾರಜೋಳ ತಿಳಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ನಾಯಕರುಗಳು ಚರ್ಚಿಸಿ ಒಳ ಮೀಸಲಾತಿ ಜಾರಿಗೊಳಿಸಲು ಬದ್ದರಾಗಿದ್ದಾರೆ. ಒಳ ಮೀಸಲಾತಿ ಜಾರಿಗೊಳಿಸುವ ಅಧಿಕಾರ ಆಯಾ ರಾಜ್ಯಗಳಿಗಿದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ್ದರೂ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಹಾ ಮೋಸದಾಟ ಆಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಒಳ ಮೀಸಲಾತಿಯಿಂದ ಲಂಬಾಣಿ, ಬೋವಿ, ಕೊರಚ, ಕೊರಮ ಇವರುಗಳನ್ನು ಬಿಜೆಪಿಯವರು ತೆಗೆದು ಹಾಕುತ್ತಾರೆಂದು ಅಪ ಪ್ರಚಾರ ಮಾಡುತ್ತಾ ಜನರನ್ನು ದಿಕ್ಕು ತಪ್ಪಿಸುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ಅವರು, ನಾವು ವೋಟ್ ಬ್ಯಾಂಕ್ ರಾಜಕಾರಣ ಮಾಡುವುದಿಲ್ಲ. ಸಾಮಾಜಿಕ ನ್ಯಾಯ ಎತ್ತಿಹಿಡಿಯುತ್ತೇವೆ. ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿ ಇನ್ನೆರಡು ದಿನಗಳಲ್ಲಿ ಹೋರಾಟ ಆರಂಭಿಸುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಐವತ್ತಕ್ಕೂ ಹೆಚ್ಚು ಬಾರಿ ಸಂವಿಧಾನವನ್ನು ತಿದ್ದುಪಡಿಗೊಳಿಸಿದೆ. ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದವರಿಗೆ ನೌಕರಿಯಲ್ಲಿ ಮೀಸಲಾತಿ ಕೊಡಬಾರದೆಂದು ಎಸ್.ಎಂ.ಕೃಷ್ಣ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ತೆಗೆದುಕೊಂಡ ತೀರ್ಮಾನಕ್ಕೆ ಅಂದಿನ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ನೌಕರಿಯಲ್ಲಷ್ಟೆ ಅಲ್ಲ. ಬಡ್ತಿಯಲ್ಲಿಯೂ ಮೀಸಲಾತಿ ಕೊಟ್ಟಿದ್ದರು ಎನ್ನುವುದನ್ನು ನೆನಪಿಸಿಕೊಂಡು ಕೆನೆಪದರವನ್ನು ಮೀಸಲಾತಿಯಲ್ಲಿ ಅಳವಡಿಸಲ್ಲ ಎಂದು ಪ್ರಧಾನಿ ನರೇಂದ್ರಮೋದಿ ಪಕ್ಷದ ಪ್ರಮುಖರ ಸಭೆ ನಡೆಸಿ ಸ್ಪಷ್ಟವಾಗಿ ಹೇಳಿದ್ದಾರೆ. ಪರಿಶಿಷ್ಟ ಜಾತಿಯಲ್ಲಿನ ೧೦೧ ಜಾತಿಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದರು.

ಜಿಲ್ಲೆಯಲ್ಲಿ ಅಧಿಕಾರಿಗಳು ನನ್ನ ಗಮನಕ್ಕೆ ತರದೆ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡುತ್ತಿದ್ದಾರೆ. ಅಂತಹ ಅಧಿಕಾರಿಗಳನ್ನು ಸೇವೆಯಿಂದ ಅಮಾನತ್ತುಗೊಳಿಸಿ ಶಿಸ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ. ಶಿಷ್ಠಾಚಾರದ ಪ್ರಕಾರ ನನ್ನ ಗಮನಕ್ಕೆ ತರದೆ ಯಾವುದೇ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸುವಂತಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಕುರ್ಚಿಗೆ ಕಂಟಕ ಬಂದಿದ್ದರೂ ಇನ್ನು ಭಂಡತನ ಪ್ರದರ್ಶಿಸುತ್ತ ನಾನು ಮುಖ್ಯಮಂತ್ರಿಯಾಗಿರುವುದು ದೇಶದ ಪ್ರಧಾನಿ ಮೋದಿ, ಆರ್.ಎಸ್.ಎಸ್. ಜೆಡಿಎಸ್.ನವರಿಗೆ ಸಮಾಧಾನವಿಲ್ಲ ಎಂದು ಆಪಾದಿಸುತ್ತಿದ್ದಾರೆ. ಮೈತುಂಬಾ ಕಳಂಕ ಮೆತ್ತಿಕೊಂಡು ಆತ್ಮಸಾಕ್ಷಿಗನುಗುಣವಾಗಿ ನಡೆದುಕೊಳ್ಳುತ್ತಿದ್ದೇನೆಂದು ನಾಟಕ ಮಾಡುತ್ತಿದ್ದಾರೆ. ಅದರ ಬದಲು ತಪ್ಪಿತಸ್ಥನೆಂದು ಗೊತ್ತಾದ ಮೇಲೆ ಅಧಿಕಾರ ತ್ಯಜಿಸಿ ನಿಸ್ಪಕ್ಷಪಾತ ತನಿಖೆಗೆ ಸಹರಿಸುವಂತೆ ಸಂಸದ ಗೋವಿಂದ ಕಾರಜೋಳ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾ ಪ್ರಧಾನ ಕಾಯದರ್ಶಿ ಸಂಪತ್‌ಕುಮಾರ್, ನಗರ ಮಂಡಲ ಅಧ್ಯಕ್ಷ ನವೀನ್ ಚಾಲುಕ್ಯ, ವಕ್ತಾರ ನಾಗರಾಜ್ ಬೇದ್ರೆ, ಜಿ.ಪಂ. ಮಾಜಿ ಅಧ್ಯಕ್ಷ ಮೀಸೆ ಮಹಲಿಂಗಪ್ಪ ಹಾಜರಿದ್ದರು.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!