ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ‘ಜಂಬೂಸವಾರಿ’ಗೆ ಕ್ಷಣಗಣನೆ ಶುರುವಾಗಿದೆ. ಚಿನ್ನದಂಬಾರಿಯಲ್ಲಿ ವಿರಾಜಮಾನವಾಗಿ ಮೆರವಣಿಗೆ ಸಾಗುವ ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಯನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಜನರು ಕಾತರರಾಗಿದ್ದಾರೆ.
ಜೊತೆಗೆ ಜಂಬೂಸವಾರಿ ಮೆರವಣಿಗೆ ನೋಡಲು ದೇಶ-ವಿದೇಶದಿಂದ ನೋಡಲು ಪ್ರವಾಸಿಗರು ಆಗಮಿಸಿದ್ದಾರೆ. ನಾಳೆ ನಡೆಯುವ ಅದ್ದೂರಿ ಜಂಬೂಸವಾರಿ ಮೆರವಣಿಗೆ ಹೇಗಿರುತ್ತೆ? ವಿಶೇಷತೆಗಳೇನು? ಇಲ್ಲಿದೆ ಮಾಹಿತಿ.
ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಜಂಬೂಸವಾರಿ ಮೆರವಣಿಗೆಗೆ ಅಧಿಕೃತ ಚಾಲನೆ ನೀಡುವುದು ಪದ್ಧತಿ. ಅದರಂತೆ ಶನಿವಾರ ಮಧ್ಯಾಹ್ನ 1:41 ರಿಂದ 2:10 ರ ವರೆಗೆ ಸಲ್ಲುವ ಮಕರ ಲಗ್ನದಲ್ಲಿ ಅರಮನೆ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಂದಿಧ್ವಜ ಪೂಜೆ ನೆರವೇರಿಸಿ ಚಾಲನೆ ಕೊಡಲಿದ್ದಾರೆ.
ಅರಮನೆ ಒಳಗಡೆ ಚಿನ್ನದಂಬಾರಿ ಮೆರವಣಿಗೆಗೆ ಚಾಲನೆ ದೊರೆಯಲಿದೆ. ಸಂಜೆ 4 ರಿಂದ 4:30ರ ವರೆಗೆ ಸಲ್ಲುವ ಕುಂಭ ಲಗ್ನದಲ್ಲಿ ಅರಮನೆ ಆವರಣದಲ್ಲಿ ಅಭಿಮನ್ಯು ಹೊರುವ 750 ಕೆಜಿ ತೂಕದ ಚಿನ್ನದಂಬಾರಿಯಲ್ಲಿ ವಿರಾಜಮಾನಗೊಂಡ ಚಾಮುಂಡೇಶ್ವರಿ ದೇವಿ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಲಾಗುವುದು.