ಹೊಸದಿಗಂತ ಬೀದರ್:
ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ರಾಜೇಶ್ವರ್ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 65ರಲ್ಲಿ ಇಂದು ಮೈ ನಡುಗಿಸುವಂತಹ ಸರಣಿ ಅಪಘಾತ ಸಂಭವಿಸಿದೆ. ಎರಡು ಲಾರಿಗಳ ಮಧ್ಯೆ ಸಿಲುಕಿದ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಚಾಲಕ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಚಿಟಗುಪ್ಪಾ ತಾಲೂಕಿನ ಇಟಗಾ ಗ್ರಾಮದ ನಿವಾಸಿ ಜೈಭೀಮ್ (36) ಮೃತಪಟ್ಟ ದುರ್ದೈವಿ. ಇವರು ಇಟಗಾ ಗ್ರಾಮದಿಂದ ಇಲ್ಯಾಳ ಗ್ರಾಮಕ್ಕೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಹೆದ್ದಾರಿಯ ಮಧ್ಯೆ ಕೆಟ್ಟು ನಿಂತಿದ್ದ ಲಾರಿಯನ್ನು ಚಾಲಕ ಮತ್ತು ಕ್ಲೀನರ್ ರಸ್ತೆ ಬದಿಯಲ್ಲೇ ದುರಸ್ತಿ ಮಾಡುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಜೈಭೀಮ್ ಅವರ ಕಾರು, ನಿಯಂತ್ರಣ ತಪ್ಪಿ ಲಾರಿಯ ಹಿಂಭಾಗಕ್ಕೆ ರಭಸವಾಗಿ ಡಿಕ್ಕಿ ಹೊಡೆದಿದೆ. ದುರಂತವೆಂದರೆ, ಇದೇ ಸಮಯದಲ್ಲಿ ಕಾರಿನ ಹಿಂದೆಯೇ ವೇಗವಾಗಿ ಬಂದ ಕಂಟೇನರ್ ಲಾರಿಯೊಂದು ಕಾರಿಗೆ ಗುದ್ದಿದೆ.
ಮುಂದೆ ನಿಂತಿದ್ದ ಲಾರಿ ಮತ್ತು ಹಿಂದೆ ಬಂದಪ್ಪಳಿಸಿದ ಕಂಟೇನರ್ ನಡುವೆ ಕಾರು ಸಿಲುಕಿಕೊಂಡಿದ್ದರಿಂದ, ವಾಹನವು ಸಂಪೂರ್ಣವಾಗಿ ಜಖಂಗೊಂಡಿದೆ. ತೀವ್ರವಾಗಿ ಪೆಟ್ಟು ತಿಂದ ಚಾಲಕ ಜೈಭೀಮ್ ಅವರು ಚಿಕಿತ್ಸೆಗೂ ಅವಕಾಶವಿಲ್ಲದಂತೆ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಹುಮನಾಬಾದ್ ಡಿವೈಎಸ್ಪಿ ಮುಡೋಳಪ್ಪ, ಬಸವಕಲ್ಯಾಣ ಸಿಪಿಐ ಅಲಿಸಾಬ್ ಹಾಗೂ ಹುಮನಾಬಾದ್ ಸಿಪಿಐ ಸಂತೋಷ ತಟ್ಟೆಪಳ್ಳಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.



