October 17, 2026
Saturday, October 17, 2026
spot_img

ಪುತ್ತೂರಿನಲ್ಲಿ ಚಾಕು ವಿವಾದ: ಯುವತಿಯ ದೂರು, ಯುವಕರಿಂದ ಪ್ರತಿದೂರು, ಪೊಲೀಸರಿಂದ ಸಮಗ್ರ ತನಿಖೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆಲಸಕ್ಕೆ ತೆರಳುತ್ತಿದ್ದ ವೇಳೆ ಪರಿಚಯದ ಯುವಕರು ಚಾಕು ಹಿಡಿದು ನಿಂತಿರುವುದು ಕಂಡು ಆತಂಕಗೊಂಡ ಯುವತಿಯೊಬ್ಬರು ಪೊಲೀಸರಿಗೆ ನೀಡಿದ ದೂರಿನ ಆಧಾರದ ಮೇಲೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೇ ವೇಳೆ, ತಮ್ಮ ವಿರುದ್ಧ ದುರುದ್ದೇಶಪೂರ್ವಕವಾಗಿ ಪ್ರಕರಣ ದಾಖಲಿಸಲು ಯತ್ನಿಸಲಾಗಿದೆ ಎಂದು ಆರೋಪಿಸಿ ಸಂಬಂಧಿತ ಯುವಕರೂ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಪುತ್ತೂರಿನ ನಿವಾಸಿಯಾದ ಯುವತಿಯೊಬ್ಬರು ಜು.8ರಂದು ಬೆಳಿಗ್ಗೆ ಸುಮಾರು 6.45ರ ವೇಳೆಗೆ ಕೆಲಸಕ್ಕೆ ತೆರಳುತ್ತಿದ್ದಾಗ, ತಮ್ಮ ಪರಿಚಯದ ಹಾಗೂ ಕಾಲೇಜು ಸಹಪಾಠಿಯಾಗಿದ್ದ ಯುವಕ ಚಾಕು ಹಿಡಿದು ನಿಂತಿರುವುದನ್ನು ಗಮನಿಸಿದ್ದಾರೆ. ಬಳಿಕ ಆತನೊಂದಿಗೆ ಇದ್ದ ನಾಲ್ವರು ಸ್ನೇಹಿತರು ವಾಹನದಲ್ಲಿ ತಮ್ಮನ್ನು ಹಿಂಬಾಲಿಸುತ್ತಿದ್ದಾರೆ ಎಂಬ ಅನುಮಾನ ವ್ಯಕ್ತಪಡಿಸಿ ಆಕೆ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

ಬಳಿಕ ಯುವಕರನ್ನು ಪೊಲೀಸರು ವಿಚಾರಣೆ ನಡೆಸಿದ್ದು ಈ ವೇಳೆ ಅವರು ಬೇಕರಿಯೊಂದರಲ್ಲಿ ಬ್ರೆಡ್ ಖರೀದಿಸಿ ಅದಕ್ಕೆ ಚೀಸ್ ಹರಡಲು ಬೇಕರಿಯಿಂದ ಚಾಕುವನ್ನು ಪಡೆದಿದ್ದು, ಬಳಿಕ ಚಾಕುವನ್ನು ಬೇಕರಿಗೆ ಹಿಂತಿರುಗಿಸಲು ಹೋಗಿದ್ದೇವೆ, ನಾವು ಯಾವುದೇ ಅಪರಾಧಿ ಕೃತ್ಯದಲ್ಲಿ ತೊಡಗಿಲ್ಲ, ನಿತ್ಯದಂತೆ ಜಿಮ್ ಗೆ ತೆರಳಿರುವುದಾಗಿ ತಿಳಿಸಿದ್ದಾರೆ. ಜೊತೆಗೆ ತಮ್ಮ ಮೇಲೆ ದುರುದ್ದೇಶಪೂರ್ವಕವಾಗಿ ಯುವತಿಯ ಮೂಲಕ ಪ್ರಕರಣ ದಾಖಲಿಸಲು ಯತ್ನಿಸಲಾಗಿದೆ ಎಂದು ಯುವಕರು ಪುತ್ತೂರು ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.

ಈ ಕುರಿತು ಎರಡೂ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿರುವ ಪೊಲೀಸರು, ಲಭ್ಯವಿರುವ ಸಾಕ್ಷ್ಯಗಳು, ಸಿಸಿಟಿವಿ ದೃಶ್ಯಗಳು ಹಾಗೂ ಸಂಬಂಧಪಟ್ಟವರ ಹೇಳಿಕೆಗಳ ಆಧಾರದ ಮೇಲೆ ಸಮಗ್ರ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:

ತನಿಖೆ ಪೂರ್ಣಗೊಳ್ಳುವ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಅಥವಾ ಪರಿಶೀಲಿಸದ ಮಾಹಿತಿಯನ್ನು ಹಂಚಬಾರದು. ತಪ್ಪು ಮಾಹಿತಿ ಹರಡುವವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.





Must Read