ಡೊಳ್ಳುಕುಣಿತ, ಕಂಗೀಲು, ತಮಟೆ, ಹುಲಿ ವೇಷ ಗೌಜಿಯ ನಡುವೆ ವೈಭವದ ಮಂಗಳೂರು ದಸರಾಗೆ ಅದ್ಧೂರಿ ತೆರೆ

ಹೊಸದಿಗಂತ ವರದಿ,ಮಂಗಳೂರು;

ಮಂಗಳೂರು ದಸರಾ ಎಂದೇ ಖ್ಯಾತಿ ಪಡೆದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ನವರಾತ್ರಿ ಉತ್ಸವಕ್ಕೆ ಭಾನುವಾರ ಸಂಜೆ ತೆರೆಬಿದ್ದಿದೆ.

ವಿವಿಧ ಜಿಲ್ಲೆಗಳ ಕಲಾ ತಂಡಗಳು, ಆಕರ್ಷಕ ಸ್ತಬ್ಧಚಿತ್ರಗಳು, ಹುಲಿವೇಷ ತಂಡಗಳು ಶೋಭಾಯಾತ್ರೆಯ ಕಳೆ ಹೆಚ್ಚಿಸಿದವು. ನಗರದ ಪ್ರಮುಖ ರಸ್ತೆಗಳಲ್ಲಿ ಹಾದುಹೋಗಲಿರುವ ನವದುರ್ಗೆಯರನ್ನು ಕಾಣಲು ಸಾವಿರಾರು ಸಂಖ್ಯೆಯಲ್ಲಿ ಜನತೆ ರಸ್ತೆಯ ಇಕ್ಕೆಲಗಳಲ್ಲಿ ಸೇರಿದ್ದಾರೆ. ಡೊಳ್ಳುಕುಣಿತ, ಕಂಗೀಲು, ತಮಟೆ ವಾದನ, ವೀರಗಾಸೆ, ಹಗಲು ವೇಷ, ಕುರುಬರ ಡೊಳ್ಳು ಕುಣಿತ ತಂಡ ಸೇರಿದಂತೆ ಹಲವು ಜಾನಪದ ಕಲಾ ತಂಡಗಳು ಅದ್ಭುತ ಪ್ರದರ್ಶನದ ಮೂಲಕ ಗಮನಸೆಳೆದವು.

ಶಾರದೆ, ಗಣಪತಿ ಸೇರಿದಂತೆ ನವದುರ್ಗೆಯರನ್ನು ಹೊತ್ತ ಅಲಂಕೃತ ವಾಹನಗಳು ನಗರದ ರಾಜಬೀದಿಗಳಲ್ಲಿ ಸಾಗುತ್ತಿದ್ದು, ಸೋಮವಾರ ಮುಂಜಾನೆ ವೇಳೆಗೆ ಮರಳಿ ಕುದ್ರೋಳಿ ಕ್ಷೇತ್ರಕ್ಕೆ ಆಗಮಿಸಲಿದೆ. ಬಳಿಕ ಶ್ರೀ ಕ್ಷೇತ್ರದ ಕೆರೆಯಲ್ಲಿ ವಿಗ್ರಹಗಳ ವಿಸರ್ಜನೆಯಾಗಲಿದೆ.

ಶಾರದೆ ಟ್ಯಾಬ್ಲೋದ ಬಳಿಕ ಶೋಭಾಯಾತ್ರೆಯ ಮೊದಲ ಮರ್ಯಾದೆಯ ಮಂಜಲ್‌ಬೈಲ್ ತಂಡದ ಹುಲಿವೇಷ, 2ನೇ ಮರ್ಯಾದೆಯ ಕಾಳಿಚರಣ್ ತಂಡದ ಹುಲಿವೇಷ ಸಹಿತ ಸ್ತಬ್ದಚಿತ್ರ, ಮೂರನೇ ಮರ್ಯಾದೆಯ ಬರ್ಕೆ ಫ್ರೆಂಡ್ಸ್ ತಂಡದ ಹುಲಿವೇಷ ಹಾಗೂ ಸ್ತಬ್ದಚಿತ್ರ ಸಾಗುವ ಮೂಲಕ ಗಮನಸೆಳೆದವು. ಅಲ್ಲದೆ 20 ಕ್ಕೂ ಅಕ ಹುಲಿವೇಷ ತಂಡಗಳ ಅಬ್ಬರ ಶೋಭಾಯಾತ್ರೆಯ ಮೆರುಗು ಹೆಚ್ಚಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!