ಹಳಿಗೆ ಕಲ್ಲಿರಿಸಿದ ಆಗಂತುಕರು: ಭಾರೀ ಸದ್ದಿಗೆ ಬೆಚ್ಚಿದ ಮಂಗಳೂರು, ರೈಲು ದುರಂತ ನಡೆಸಲು ವ್ಯವಸ್ಥಿತ ಹುನ್ನಾರ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಂಗಳೂರು ನಗರದ ಹೊರವಲಯ ಉಳ್ಳಾಲ ತಾಲೂಕಿನ ತೊಕ್ಕೊಟ್ಟು ಓವರ್ ಬ್ರಿಡ್ಜ್ ಕೆಳಭಾಗದಲ್ಲಿ ರೈಲು ಹಳಿಗಳಲ್ಲಿ ಆಗಂತುಕರಿಬ್ಬರು ಕಲ್ಲುಗಳನ್ನು ಇರಿಸಿ ಪರಾರಿಯಾದ ಆಘಾತಕಾರಿ ಘಟನೆ ಕಳೆದ ರಾತ್ರಿ ನಡೆದಿದ್ದು, ಈ ಭಾಗದಲ್ಲಿ ಹಾದು ಹೋದ ಸಂದರ್ಭ ಭಾರೀ ಸದ್ದು ಕೇಳಿಸಿದೆ.

ಸದ್ದಿನ ತೀವ್ರತೆಗೆ ಸ್ಥಳೀಯರು ಬೆಚ್ಚಿಬಿದ್ದಿದ್ದು, ರೈಲು ದುರಂತ ಸಂಭವಿದೆ ಎಂದೇ ಅಂದುಕೊಂಡಿದ್ದರು. ಆದರೆ ಅದೃಷ್ಟವಶಾತ್ ಸಂಭಾವ್ಯ ಭಾರೀ ಅನಾಹುತದಿಂದ ರೈಲುಗಳು ಕೂದಲೆಳೆ ಅಂತರದಲ್ಲಿ ಪಾರಾಗಿವೆ. ಈ ಬೆಳವಣಿಗೆ ಇಲ್ಲೊಂದು ರೈಲು ದುರಂತ ನಡೆಸುವ ವ್ಯವಸ್ಥಿತ ಹುನ್ನಾರ ನಡೆದಿತ್ತೇ ಎಂಬ ಅನುಮಾನವನ್ನು ಹುಟ್ಟುಹಾಕಿದೆ.

ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ತೊಕ್ಕೊಟ್ಟು ಓವರ್ ಬ್ರಿಡ್ಜ್ ನ ನಿವಾಸಿ ಮಹಿಳೆಯರು ಹಳಿಯಲ್ಲಿ ಇಬ್ಬರು ಅಪರಿಚಿತರನ್ನ ಕಂಡಿದ್ದರು. ಮಹಿಳೆಯರು ಮನೆ ತಲುಪಿದಾಗ ರೈಲೊಂದು ಕೇರಳ ಕಡೆಗೆ ತೆರಳಿದ್ದು, ಈ ವೇಳೆ ಭಾರೀ ಸದ್ದು ಕೇಳಿಸಿತ್ತು. ಇದನ್ನ ಸ್ಥಳೀಯರು ಅಷ್ಟು ಗಂಭೀರವಾಗಿ ಪರಿಗಣಿಸಿರಲಿಲ್ಲ. ಬಳಿಕ ಎರಡು ರೈಲು ಚಲಿಸಿದಾಗಲೂ ಮತ್ತೆ ಅಂತಹದ್ದೇ ಭಾರೀ ಸದ್ದು ಕೇಳಿಸಿದೆ. ಘಟನೆಯಿಂದ ಸ್ಥಳೀಯರ ಮನೆಗಳೂ ಕಂಪಿಸಿದೆ. ತಕ್ಷಣವೇ ಸ್ಥಳೀಯರು ರೈಲು ಅಪಘಾತವೆಂದು ಭಾವಿಸಿ ಹಳಿಯತ್ತ ದೌಡಾಯಿಸಿದಾಗ ಹಳಿ ಮೇಲಿರಿಸಲಾದ ಜಲ್ಲಿಕಲ್ಲುಗಳು ತುಂಡಾಗಿರುವುದು ಕಂಡು ಬಂದಿದೆ.

ಇದೇ ಮೊದಲಬಾರಿಗೆ ಅನುಭವ
ಅನೇಕ ವರ್ಷಗಳಿಂದ ತೊಕ್ಕೊಟ್ಟು ಪರಿಸರದಲ್ಲಿ ನಾವು ನೆಲೆಸಿದ್ದು ರೈಲು ಹಳಿಯಲ್ಲಿ ಕಂಪನದ ಅನುಭವ ಇದೇ ಮೊದಲ ಬಾರಿಗೆ ಆಗಿದೆ ಅನ್ನುವ ಅಭಿಪ್ರಾಯವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಈ ಕುರಿತು ರೈಲ್ವೆ ಪೊಲೀಸ್ ಠಾಣೆ ಮತ್ತು ಉಳ್ಳಾಲ ಪೊಲೀಸ್ ಠಾಣೆಗೆ ಸ್ಥಳೀಯರು ಮಾಹಿತಿಯನ್ನು ನೀಡಿದ್ದಾರೆ.

ಉಳ್ಳಾಲ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಬಾಲಕೃಷ್ಣ ಅವರು ಭಾನುವಾರ ಬೆಳಿಗ್ಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತೀಚಿಗೆ ಪಾಕ್ ಭಯೋತ್ಪಾದಕ ಫರ್ಹಾತುಲ್ಲಾ ಘೋರಿ ಭಾರತದಾದ್ಯಂತ ರೈಲುಗಳನ್ನು ಹಳಿ ತಪ್ಪಿಸುವ ಎಚ್ಚರಿಕೆ ನೀಡಿದ್ದ ಬೆನ್ನಲ್ಲೇ ತೊಕ್ಕೊಟ್ಟಿನ ಘಟನೆ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!