January22, 2026
Thursday, January 22, 2026
spot_img

ರನ್ ಇಲ್ಲ, ಫೀಲ್ಡಿಂಗ್ ಸರಿ ಇಲ್ಲ.. ತಂಡದಿಂದ ಕೊಕ್ ಸಿಗುವ ಮೊದಲೇ ಬಿಗ್ ಬ್ಯಾಷ್‌ಗೆ ಬಾಬರ್ ಗುಡ್ ಬೈ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಸ್ಟ್ರೇಲಿಯಾದ ಪ್ರತಿಷ್ಠಿತ ಬಿಗ್ ಬ್ಯಾಷ್ ಲೀಗ್ ನಿಂದ ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಬಾಬರ್ ಆಝಂ ಅರ್ಧದಲ್ಲೇ ಹೊರನಡೆದಿದ್ದಾರೆ. ಸಿಡ್ನಿ ಸಿಕ್ಸರ್ಸ್ ತಂಡದ ಪರ ಆಡುತ್ತಿದ್ದ ಬಾಬರ್, ತಂಡವು ಅತ್ಯಂತ ನಿರ್ಣಾಯಕ ಘಟ್ಟದಲ್ಲಿರುವಾಗಲೇ ಟೂರ್ನಿಯನ್ನು ಕೈಬಿಟ್ಟಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಮತ್ತೊಂದು ಸುತ್ತಿನ ಮುಖಭಂಗದಿಂದ ತಪ್ಪಿಸಿಕೊಳ್ಳಲು ಬಾಬರ್ ಈ ನಿರ್ಧಾರ ತಳೆದಿದ್ದಾರೆ ಎನ್ನಲಾಗುತ್ತಿದೆ.

ಈ ಬಾರಿಯ ಸೀಸನ್‌ನಲ್ಲಿ ಸಿಡ್ನಿ ಸಿಕ್ಸರ್ಸ್ ಪರ ಆಡಿದ್ದ ಬಾಬರ್ ಆಝಂ ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ ಎರಡರಲ್ಲೂ ವಿಫಲರಾಗಿದ್ದರು.

ಪಂದ್ಯಗಳು: 11

ಒಟ್ಟು ರನ್: 202

ಸರಾಸರಿ: 22.44

ಸ್ಟ್ರೈಕ್ ರೇಟ್: ಕೇವಲ 103

ಮೈದಾನದಲ್ಲಿ ಬಾಬರ್ ರನ್ ಗಳಿಸಲು ಪರದಾಡುತ್ತಿದ್ದಾಗ ಸಹ ಆಟಗಾರ ಸ್ಟಿವನ್ ಸ್ಮಿತ್ ಸ್ಟ್ರೈಕ್ ನೀಡಲು ಹಿಂದೇಟು ಹಾಕಿದ್ದು ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. ಇದರ ಜೊತೆಗೆ ಬಾಬರ್ ಅವರ ಮೈದಾನದ ಫೀಲ್ಡಿಂಗ್ ಕೂಡ ಸಿಡ್ನಿ ಸಿಕ್ಸರ್ಸ್ ಆಟಗಾರರ ಅಸಮಾಧಾನಕ್ಕೆ ಕಾರಣವಾಗಿತ್ತು.

ಜನವರಿ 23 ರಂದು ಹೋಬಾರ್ಟ್ ಹರಿಕೇನ್ಸ್ ವಿರುದ್ಧ ನಡೆಯಲಿರುವ ‘ಚಾಲೆಂಜರ್’ (ಸೆಮಿಫೈನಲ್) ಪಂದ್ಯ ಸಿಡ್ನಿ ತಂಡಕ್ಕೆ ಅತ್ಯಂತ ಮುಖ್ಯವಾಗಿದೆ. ಇಂತಹ ನಿರ್ಣಾಯಕ ಪಂದ್ಯದಿಂದ ಬಾಬರ್ ಅವರನ್ನು ಕೈಬಿಟ್ಟು ಹೊಸ ಆರಂಭಿಕ ಆಟಗಾರನನ್ನು ಕಣಕ್ಕಿಳಿಸಲು ಮ್ಯಾನೇಜ್‌ಮೆಂಟ್ ನಿರ್ಧರಿಸಿತ್ತು ಎನ್ನಲಾಗಿದೆ. ಈ ಅವಮಾನದಿಂದ ತಪ್ಪಿಸಿಕೊಳ್ಳಲು ಬಾಬರ್, ಆಸ್ಟ್ರೇಲಿಯಾ ವಿರುದ್ಧದ ಮುಂಬರುವ ಟಿ20 ಸರಣಿಯ ತಯಾರಿಯ ನೆಪವೊಡ್ಡಿ ತವರಿಗೆ ಮರಳಿದ್ದಾರೆ.

ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ಟಿ20 ಸರಣಿ ಆರಂಭವಾಗುವುದು ಜನವರಿ 29 ರಿಂದ. ಅಂದರೆ ಇನ್ನೂ ಒಂದು ವಾರ ಬಾಕಿ ಇದೆ. ಇತ್ತ ಬಿಗ್ ಬ್ಯಾಷ್ ಮುಗಿಯಲು ಕೇವಲ 3 ದಿನಗಳಷ್ಟೇ ಬಾಕಿ ಇದೆ. ಕೇವಲ 3 ದಿನ ಮುಂಚಿತವಾಗಿ ಸರಣಿಯ ನೆಪವೊಡ್ಡಿ ಹೊರನಡೆದಿರುವುದು, ತಂಡದಿಂದ ಹೊರಹಾಕುವ ಮೊದಲೇ ಗೌರವಯುತವಾಗಿ ನಿರ್ಗಮಿಸುವ ತಂತ್ರ ಎನ್ನಲಾಗುತ್ತಿದೆ.

Must Read