April 28, 2026
Tuesday, April 28, 2026
spot_img

ಅವಳಿ ನಗರಕ್ಕೆ ‘ಸಪ್ತ ಸೂತ್ರ’ಗಳ ಬಲ: 1603 ಕೋಟಿ ಮೊತ್ತದ ಪಾಲಿಕೆ ಬಜೆಟ್ ಮಂಡನೆ!

ಹೊಸದಿಗಂತ ಹುಬ್ಬಳ್ಳಿ:

ಅವಳಿ ನಗರದ ಸಮಗ್ರ ವಿಕಾಸ ಹಾಗೂ ಸ್ವಾವಲಂಬನೆಯ ಗುರಿಯೊಂದಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು 1603.26 ಕೋಟಿ ರೂಪಾಯಿ ಮೊತ್ತದ ಬೃಹತ್ ಬಜೆಟ್ ಅನ್ನು ಸೋಮವಾರ ಮಂಡಿಸಿದೆ. ತೆರಿಗೆ ನಿರ್ಧರಣೆ, ಹಣಕಾಸು ಹಾಗೂ ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ವಂಟಮುರಿ ಅವರು ಪಾಲಿಕೆ ಸಭಾಭವನದಲ್ಲಿ ಈ ಆಯವ್ಯಯವನ್ನು ಮಂಡಿಸಿದರು.

ಬಜೆಟ್‌ನ ಪ್ರಮುಖ ಅಂಶಗಳು:

ವಾರ್ಡ್ ಅಭಿವೃದ್ಧಿ: ಪಾಲಿಕೆ ವಾರ್ಡ್‌ಗಳ ಮೂಲಸೌಕರ್ಯಕ್ಕಾಗಿ 120 ಕೋಟಿ ರೂ. ಗಳ ಸದಸ್ಯರ ನಿಧಿ ಮೀಸಲು.

ಗ್ರಾಮೀಣಾಭಿವೃದ್ಧಿ: ಪಾಲಿಕೆ ವ್ಯಾಪ್ತಿಗೆ ಒಳಪಡುವ ಹಳ್ಳಿಗಳ ಅಭಿವೃದ್ಧಿಗೆ 11 ಕೋಟಿ ರೂ. ಅನುದಾನ.

ಆಸ್ತಿ ಸಮೀಕ್ಷೆ: ಜಿಐಎಸ್ (GIS) ತಂತ್ರಜ್ಞಾನದ ಮೂಲಕ ಆಸ್ತಿ ಸಮೀಕ್ಷೆ ನಡೆಸಲು 23.50 ಕೋಟಿ ರೂ. ನಿಗದಿ.

ಚೆನ್ನಮ್ಮ ವೃತ್ತದ ನವೀಕರಣ: ಐತಿಹಾಸಿಕ ಕಿತ್ತೂರು ಚೆನ್ನಮ್ಮ ವೃತ್ತದ ಪುತ್ಥಳಿ ಮೇಲ್ದರ್ಜೆಗೇರಿಸಲು 5 ಕೋಟಿ ರೂ. ಮೀಸಲು.

ಆರೋಗ್ಯ ಕ್ಷೇತ್ರ: ಪಾಲಿಕೆ ಆಸ್ಪತ್ರೆಗಳ ನಿರ್ವಹಣೆಗೆ 5.42 ಕೋಟಿ ರೂ., ಧಾರವಾಡ ಆಸ್ಪತ್ರೆಗೆ 50 ಲಕ್ಷ ರೂ. ಹಾಗೂ ಮಹಿಳಾ ಸಾಂತ್ವನ ಕೇಂದ್ರ ಸ್ಥಾಪನೆಗೆ 50 ಲಕ್ಷ ರೂ. ನೀಡಲಾಗಿದೆ.

ಮಹಿಳಾ ಸಬಲೀಕರಣ: ಪ್ರತಿ ವಾರ್ಡ್‌ಗೆ ಒಂದರಂತೆ ‘ಪಿಂಕ್ ಇ-ಆಟೋ’ ವಿತರಿಸುವ ವಿನೂತನ ಯೋಜನೆ ಘೋಷಣೆ.

ಪರಿಸರ ಮತ್ತು ನೀರು: ಕೆರೆ ಹಾಗೂ ಉದ್ಯಾನವನಗಳ ಅಭಿವೃದ್ಧಿಗೆ ‘ಅಮೃತ’ ಯೋಜನೆಯಡಿ 28.75 ಕೋಟಿ ರೂ. ನಿರೀಕ್ಷಿಸಲಾಗಿದ್ದು, 24 ಗಂಟೆ ನಿರಂತರ ನೀರು ಸರಬರಾಜಿಗೆ ಒತ್ತು ನೀಡಲಾಗಿದೆ.

ಕಳೆದ ವರ್ಷ 186 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸಿದ್ದ ಪಾಲಿಕೆ, ಈ ಬಾರಿ 333 ಕೋಟಿ ರೂ. ಸಂಗ್ರಹದ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದೆ.

“ಸ್ವಾವಲಂಬಿ ಹಾಗೂ ಸದೃಢ ಅಭಿವೃದ್ಧಿಯ ಪಾಲಿಕೆ” ಎಂಬ ಘೋಷವಾಕ್ಯದೊಂದಿಗೆ, ಆದಾಯ ಕ್ರೂಡೀಕರಣ, ಪೌರಕಾರ್ಮಿಕರ ಕಲ್ಯಾಣ ಮತ್ತು ಘನತ್ಯಾಜ್ಯ ನಿರ್ವಹಣೆಯನ್ನೊಳಗೊಂಡ ಸಪ್ತ ಸೂತ್ರಗಳನ್ನು ಜಾರಿಗೆ ತರಲು ಪಾಲಿಕೆ ಸಂಕಲ್ಪ ಮಾಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !