ಹೊಸದಿಗಂತ ವರದಿ, ಯಲ್ಲಾಪುರ
ಯಲ್ಲಾಪುರ ತಾಲೂಕಿನ ಹಿತ್ಲಳ್ಳಿ ಬಳಿಯ ಪುರಲೆಮನೆ ಹತ್ತಿರ ಉಟಾರ್ತಿ ರಸ್ತೆಯಲ್ಲಿ ಚಿರತೆ ಓಡಾಟ ನಡೆಸಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಶನಿವಾರ ರಾತ್ರಿ ಹಿತ್ತಳ್ಳಿಯಿಂದ ಚವತ್ತಿ ಹೋಗುವ ದಾರಿಯಲ್ಲಿ ರಾತ್ರಿ ಸರಿ ಸುಮಾರು 9.30 ಕೆ ಪಂಚಾಯತ್ ಸದಸ್ಯ ಪ್ರಸನ್ನ ಭಟ್ ಅವರ ಕಾರಿಗೆ ದಾರಿಯಲ್ಲಿ ಚಿರತೆ ಅಡ್ಡ ಬಂದಿತ್ತು. ಅದೇ ರೀತಿ ಭಾನುವಾರ ಪುರಲ್ಲೇ ಮನೆ ಹತ್ತಿರ ಉಟಾರ್ತಿ ರಸ್ತೆಯಲ್ಲಿ ಹಾಡು ಹಗಲಲ್ಲಿ ಚಿರತೆ ಕಾಡಿನ ಮಧ್ಯರಸ್ತೆಯಲ್ಲಿ ಸಂಚರಿಸುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಭಾಗದ ಅರಣ್ಯಾಧಿಕಾರಿಗಳು ಕೂಡಲೇ ಚಿರತೆಯನ್ನು ಸೆರೆಹಿಡಿದು ಬೇರೆ ಕಡೆಗೆ ರವಾನೆ ಮಾಡಬೇಕು, ಅಥವಾ ಸಂರಕ್ಷಿತ ಅರಣ್ಯಕ್ಕೆ ಚಿರತೆಯನ್ನು ಬಿಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.