ಹೊಸದಿಗಂತ ಡಿಜಿಟಲ್ ಡೆಸ್ಕ್:
2026 ರ ಟಿ20 ವಿಶ್ವಕಪ್ ಟೂರ್ನಿ ನಿಂದ ಬಾಂಗ್ಲಾದೇಶ ತಂಡ ಹಿಂದೆ ಸರಿದಿದೆ. ಭಾರತದಿಂದ ತನ್ನ ತಂಡದ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸದಿರುವುದರಿಂದ ಅಸಮಾಧಾನಗೊಂಡಿರುವ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ತನ್ನ ತಂಡದ ಹೆಸರನ್ನು ಟೂರ್ನಿಯಿಂದ ಹಿಂಪಡೆದಿದೆ.
ಬಾಂಗ್ಲಾದೇಶ ತನ್ನ ತಂಡವನ್ನು ಭಾರತಕ್ಕೆ ಕಳುಹಿಸದಿದ್ದರೆ, ಅದರ ಸ್ಥಾನದಲ್ಲಿ ಸ್ಕಾಟ್ಲೆಂಡ್ಗೆ ಟಿ20 ವಿಶ್ವಕಪ್ ಆಡುವ ಅವಕಾಶ ನೀಡಲಾಗುವುದು ಎಂದು ಐಸಿಸಿ ಎಚ್ಚರಿಕೆ ನೀಡಿತ್ತು. ಆ ಪ್ರಕಾರ, ಸ್ಕಾಟ್ಲೆಂಡ್ ತಂಡ ಮಿನಿ ವಿಶ್ವಕಪ್ ಸಮರದಲ್ಲಿ ಕಾಣಿಸಿಕೊಳ್ಳಲಿದೆ.
ಈ ಮೊದಲು ಐಸಿಸಿ ಪ್ರಕಟಿಸಿದ ವೇಳಾಪಟ್ಟಿಯ ಪ್ರಕಾರ, ಬಾಂಗ್ಲಾದೇಶ ತಂಡವನ್ನು ಸಿ ಗುಂಪಿನಲ್ಲಿ ಇರಿಸಲಾಗಿತ್ತು. ಈ ಗುಂಪಿನಲ್ಲಿ ಬಾಂಗ್ಲಾದೇಶ ತಂಡವನ್ನು ಹೊರತುಪಡಿಸಿ ಇಂಗ್ಲೆಂಡ್, ಇಟಲಿ, ನೇಪಾಳ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಇದ್ದವು. ಇದೀಗ ಬಾಂಗ್ಲಾದೇಶ ಹೊರಬಿದ್ದಿರುವುದರಿಂದ ಅದರ ಜಾಗದಲ್ಲಿ ಸ್ಕಾಟ್ಲೆಂಡ್ ಆಡಲಿದೆ. ವೇಳಾಪಟ್ಟಿಯ ಪ್ರಕಾರ ಸ್ಕಾಟ್ಲೆಂಡ್ ತನ್ನ ಮೊದಲ ಪಂದ್ಯವನ್ನು ಫೆಬ್ರವರಿ 7 ರಂದು ವೆಸ್ಟ್ ಇಂಡೀಸ್ ವಿರುದ್ಧ ಆಡಲಿದೆ.
ಟಿ20 ವಿಶ್ವಕಪ್‌ನಲ್ಲಿ ಸ್ಕಾಟ್ಲೆಂಡ್ ದಾಖಲೆ ಹೇಗಿದೆ?
ಈ ವರ್ಷದ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆಯುವಲ್ಲಿ ಸ್ಕಾಟ್ಲೆಂಡ್ ವಿಫಲವಾಯಿತು. ಯುರೋಪಿಯನ್ ಅರ್ಹತಾ ಸುತ್ತಿನಲ್ಲಿ ಸ್ಕಾಟ್ಲೆಂಡ್ ನಾಲ್ಕನೇ ಸ್ಥಾನ ಗಳಿಸಿತು, ಆದರೆ ಈಗ ಸ್ಕಾಟ್ಲೆಂಡ್ಗೆ ಪಂದ್ಯಾವಳಿಯಲ್ಲಿ ಆಡಲು ಅವಕಾಶ ಸಿಕ್ಕಿದೆ. ಐಸಿಸಿ ಇನ್ನೂ ಯಾವುದೇ ಘೋಷಣೆ ಮಾಡದಿದ್ದರೂ, ನಿಯಮಗಳ ಪ್ರಕಾರ ಸ್ಕಾಟ್ಲೆಂಡ್‌ನ ಸ್ಥಾನ ಖಚಿತವೆಂದು ಪರಿಗಣಿಸಲಾಗಿದೆ. ಇದು ಸಂಭವಿಸಿದಲ್ಲಿ, ಸ್ಕಾಟ್ಲೆಂಡ್ ತಂಡ ಸತತ ಐದನೇ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಆಡಲಿದೆ.
ಟಿ20 ವಿಶ್ವಕಪ್‌ನಲ್ಲಿ ಸ್ಕಾಟ್ಲೆಂಡ್‌ನ ದಾಖಲೆ ಅಷ್ಟೊಂದು ಉತ್ತಮವಾಗಿಲ್ಲ. ಆರು ಬಾರಿ ಟೂರ್ನಮೆಂಟ್‌ನಲ್ಲಿ ಭಾಗವಹಿಸಿರುವ ಸ್ಕಾಟ್ಲೆಂಡ್, 22 ಪಂದ್ಯಗಳನ್ನು ಆಡಿದ್ದು, ಕೇವಲ ಏಳರಲ್ಲಿ ಗೆಲುವು ಮತ್ತು 13 ಪಂದ್ಯಗಳಲ್ಲಿ ಸೋಲು ಕಂಡಿದೆ.



