September 29, 2026
Tuesday, September 29, 2026
spot_img

ಅಮ್ಮ ಆಸ್ಪತ್ರೆಯಲ್ಲಿದ್ದಾರೆ, ಹೆಂಡತಿ ಬಿಟ್ಟುಹೋಗಿದ್ದಾಳೆ: ನನ್ನ ಜೀವನ ನರಕ ಎಂದು ಬಿಗ್‌ಬಾಸ್‌ನಲ್ಲಿ ಕಣ್ಣೀರಿಟ್ಟ ಜಗದೀಶ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಿಗ್‌ಬಾಸ್‌ ಮನೆಯಲ್ಲಿ ಜಗ್ಗಮಮ್ಮಿ ಖ್ಯಾತಿಯ ಜಗದೀಶ್‌ ಅವರು ತಮ್ಮ ಜೀವನದ ನೋವಿನ ಕಥೆಯನ್ನು ಹಂಚಿಕೊಂಡಿದ್ದಾರೆ. ಗಿಚ್ಚಿಗಿಲಿಗಿಲಿ ಖ್ಯಾತಿಯ ಪ್ರಶಾಂತ್‌ ಬಿಗ್‌ಬಾಸ್‌ ಮನೆಗೆ ಕಾಲಿಟ್ಟಿದ್ದು, ಜಗ್ಗ ಅವರ ಬಳಿ ತಮಗೆ ಒಂದು ಪವರ್‌ ಇದೆ, ನಿಮಗೆ ಫೋನ್‌ ಕೊಟ್ರೆ ಯಾರ ಬಳಿ ಮಾತನಾಡ್ತೀರಿ ಎಂದು ತಮಾಷೆಗೆ ಹೇಳಿದ್ದಾರೆ.

ಇದು ನಿಜವೆಂದು ನಂಬಿಕೊಂಡ ಜಗದೀಶ್‌ ತಮ್ಮ ಜೀವನದ ನೋವಿನ ಕಥೆಯನ್ನು ಬಿಚ್ಚಿಟ್ಟಿದ್ದಾರೆ. ನನ್ನ ಮಗಳು ಹಾಗೂ ಅಮ್ಮನಿಗೋಸ್ಕರ ಜೀವ ಉಳಿಸಿಕೊಂಡಿದ್ದೇನೆ. ನನಗೆ ಇನ್ಯಾರೂ ಇಲ್ಲ. ಅಮ್ಮ ಈಗ ಆಸ್ಪತ್ರೆಯಲ್ಲಿದ್ದಾರೆ, ಹೆಂಡತಿ ತವರಿಗೆ ಹೋದವಳು ವಾಪಾಸ್‌ ಬರಲೇ ಇಲ್ಲ. ನಾನು ಏನು ಮಾಡಿದರೂ ಎಲ್ಲವೂ ನನ್ನ ಮಗಳು ಹಾಗೂ ಅಮ್ಮನಿಗಾಗಿ ಎಂದು ಕಣ್ಣೀರಿಟ್ಟಿದ್ದಾರೆ.

ಅಮ್ಮನಿಗೆ ಆರೋಗ್ಯ ಸರಿಯಿಲ್ಲ, ಚಾಮುಂಡೇಶ್ವರಿ ದಯೆಯಿಂದ ಆಕೆ ಆರಾಮಾಗಿದ್ದರೆ ಸಾಕು. ನನಗೆ ನಾಲ್ವರು ಅಣ್ಣಂದಿರು ಇದ್ದಾರೆ. ಆದರೆ ಅಮ್ಮನನ್ನು ನೋಡಿಕೊಳ್ಳೋಕೆ ಯಾರಿಗೂ ಮನಸ್ಸಿಲ್ಲ. ಆದರೆ ನನಗೆ ಅಮ್ಮನೇ ಸರ್ವಸ್ವ. ಮದುವೆ ಆದ ನಂತರ ನಾಲ್ಕು ವರ್ಷ ನಾನು ಹಾಗೂ ಪತ್ನಿ ಅನ್ಯೂನ್ಯವಾಗಿಯೇ ಇದ್ದೆವು. ನಮಗೂ ಮುದ್ದಾದ ಮಗಳಿದ್ದಾರೆ. ನನ್ನ ಜೊತೆ ಜಗಳವಾಡಿ ತವರು ಮನೆಗೆ ಹೋದ ಪತ್ನಿ ವಾಪಾಸ್‌ ಬಂದಿಲ್ಲ. ಕನಿಷ್ಠ ಮಗಳನ್ನು ಅವರ ಮನೆಯ ಒಳಗೆ ಕರೆದುಕೊಂಡಿಲ್ಲ.

ಮಗಳು ಅಜ್ಜಿ ಮನೆಯಲ್ಲಿ ಇದ್ದಾಳೆ. ಆಕೆ ಜೊತೆಯಲ್ಲಿ ಈಗ ಅಪ್ಪನೂ ಇಲ್ಲ, ಅಮ್ಮನೂ ಇಲ್ಲ. ತಬ್ಬಲಿಯಂತೆ ಬೆಳೆಯುತ್ತಿದ್ದಾಳೆ. ಪ್ರೀತಿಯೇ ಇಲ್ಲದೆ ಬೆಳೆಯುತ್ತಿದ್ದಾಳೆ ಎಷ್ಟೆಲ್ಲಾ ನೋವು ಅನುಭವಿಸುತ್ತಿದ್ದಾಳೋ ಏನೋ ಗೊತ್ತಿಲ್ಲ ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಸಾಮಾಜಿಕ ಜಾಲತಾಣದಗಳಲ್ಲಿ ಈ ವಿಡಿಯೋ ವೈರಲ್‌ ಆಗಿದ್ದು, ಅಭಿಮಾನಿಗಳು ಜಗ್ಗ ಅವರ ಕಷ್ಟಕ್ಕೆ ಸಾಥ್‌ ನೀಡಿದ್ದಾರೆ. ಮಗಳು ನಿಮ್ಮನ್ನು ಟಿವಿಯಲ್ಲಿ ನೋಡುತ್ತಾ ಸಮಾಧಾನಿಸಿಕೊಂಡಿರುತ್ತಾಳೆ ಹೆದರದೇ ಆಟ ಆಡಿ ಎಂದು ಧೈರ್ಯ ತುಂಬಿದ್ದಾರೆ.

Must Read