ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಚುನಾವಣೆಯಲ್ಲಿ ಸೋಲಿನ ಬಳಿಕ ರಾಜಕೀಯದಿಂದ ದೂರ ಉಳಿದಿದ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಳೆದ ಚುನಾವಣೆಯಲ್ಲಿ ತಮಗೆ ಮೋಸ ಮಾಡಿದವರ ವಿರುದ್ದ ಪರೋಕ್ಷವಾಗಿ ಚಾಟಿ ಬೀಸಿದ್ದಾರೆ.
ಕೋಲಾರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಜನ್ನಘಟ್ಟ ವೆಂಕಟಮುನಿಯಪ್ಪ ಒಂದನೇ ವರ್ಷದ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಜಕೀಯ ಕುರಿತು ಬೇಸರದ ಭಾಷಣ ಮಾಡಿದ್ದಾರೆ.
ರಮೇಶ್ ಕುಮಾರ್ ಅವರು ಇತ್ತೀಚೆಗೆ ಯಾರ ಕೈಗೂ ಸಿಗುವುದಿಲ್ಲ ಎಂದು ಬಹಳ ಜನ ಮಾತಾಡ್ತಾರೆ. ಎಲ್ಲೂ ಬರುವುದೇ ಇಲ್ಲ. ಅಂತಾರೆ, ಆದ್ರೆ ಜೀವನದಲ್ಲಿ ಸೋತಿದ್ದೇನೆ, ಬದುಕಿನಲ್ಲಿ ಸೋತಾಗಿದೆ. ಮದುವೆ ಮುಂಜಿ, ರಥೋತ್ಸವ ಅದು ಇದು ಅಂತಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳಬಹುದಿತ್ತು. ಮತ್ತೆ ಇನ್ನೊಂದು ಚುನಾವಣೆಗೆ ನಿಲ್ಲೋ ಆಸೆ ಇದ್ರೆ ಮಾತ್ರ, ಬಿಳಿ ಶರ್ಟ್ ಹಾಕಿಕೊಂಡು ಕಾಣಿಸಬಹುದಿತ್ತು .ಆದ್ರೆ ಜೀವನದಲ್ಲಿ ಸೋತೆ, ಚುನಾವಣೆಯಲ್ಲಿ ಸೋತಾಗಿದೆ ಎಂದು ಬೇಸರ ಹೊರಹಾಕಿದರು. ಈ ಮೂಲಕ ಪರೋಕ್ಷವಾಗಿ ರಾಜಕೀಯ ಸಹವಾಸ ಬೇಡ ಎನ್ನುವ ಅರ್ಥದಲ್ಲಿ ಹೇಳಿದರು.
ಚುನಾವಣೆಯಲ್ಲಿ ಸೋತು ನಾಲ್ಕಾಗಿತ್ತು. 5ನೇಯದು ಈ ಬಾರಿ ಆಗೋಯ್ತು.ಯಾಕೆ ಸೋತೆ ಅಂದ್ರೆ ನಂಬಿಕೆ ದ್ರೋಹ, ಜೊತೆಗೆ ಇದ್ದು, ಕೆಲಸ ಮಾಡಿ ಎಲ್ಲಾ ಸರಿ ಎಂದು ಹೇಳಿದವರು. ಗೊತ್ತೇ ಆಗಿಲ್ಲ ನನಗೆ ಯಾರೆಲ್ಲಾ ಮಹಾನುಭಾವರಿಗೆ ಕೃತಜ್ಞತೆಗಳು ಅರ್ಪಿಸಬೇಕು ಎಂದು ಪರೋಕ್ಷವಾಗಿ ಕೆಲವರಿಗೆ ಟಾಂಗ್ ಕೊಟ್ಟರು.
ಇನ್ನು ಕಡೆ ಪಕ್ಷ ನನ್ನ ಮುಖ ನೋಡಲಿ ಎಂದು, ಮುಂದೆ ಇರುತ್ತೇನೋ ಇಲ್ಲೋ ಎನ್ನುವ ಕಾರಣಕ್ಕೆ ಕಾರ್ಯಕ್ರಮಕ್ಕೆ ಬಂದೆ ಎಂದು ಭಾಷಣದ ಉದ್ದಕ್ಕೂ ರಮೇಶ್ ಕುಮಾರ್ ಬೇಸರದ ಮಾತುಗಳನ್ನಾಡಿದರು. ಅಲ್ಲದೇ ಇವರ ಭಾಷಣವನ್ನು ಸೂಕ್ಷ್ಮವಾಗಿ ಗಮನಿಸಿದರೆ ರಾಜಕೀಯದಿಂದ ದೂರ ಉಳಿಯುವ ತೀರ್ಮಾನ ಮಾಡಿದಂತಿದೆ.