ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿಯ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಲ್ಲಿ ಪಟಾಕಿಗಳನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಉತ್ತರ ಪ್ರದೇಶ ಮತ್ತು ಹರಿಯಾಣ ಸರಕಾರಗಳಿಗೆ ಸೂಚಿಸಿದೆ.
ದೆಹಲಿ ಮತ್ತು ರಾಜಸ್ಥಾನ ಸರ್ಕಾರಗಳು ಈಗಾಗಲೇ ಪಟಾಕಿ ಸಿಡಿಸುವುದನ್ನು ನಿರ್ಬಂಧಿಸಿದ್ದರೂ, ಉಳಿದ ರಾಜ್ಯಗಳು ಇದೇ ರೀತಿಯ ಕ್ರಮ ಕೈಗೊಂಡರೆ ಮಾತ್ರ ಈ ನಿಷೇಧ ಪರಿಣಾಮಕಾರಿಯಾಗಲಿದೆ ಎಂದು ನ್ಯಾಯಮೂರ್ತಿ ಅಭಯ್ ಎಸ್.ಓಕಾ ನೇತೃತ್ವದ ನ್ಯಾಯಪೀಠ ಹೇಳಿತು.
ದೆಹಲಿ ಮತ್ತು ಎನ್ಸಿಆರ್ ಪ್ರದೇಶದಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ನ್ಯಾಯಮೂರ್ತಿ ಎ.ಜಿ.ಮಾಸಿಹ್ ಅವರನ್ನೂ ಒಳಗೊಂಡ ನ್ಯಾಯಪೀಠ ವಿಚಾರಣೆ ನಡೆಸಿತು.
ಹರಿಯಾಣದಲ್ಲಿ ಹಸಿರು ಪಟಾಕಿಗಳ ಬಳಕೆಗೆ ಅನುಮತಿ ನೀಡಲಾಗಿದ್ದರೆ, ರಾಜಸ್ಥಾನವು ಎನ್ಸಿಆರ್ ಪ್ರದೇಶದಲ್ಲಿ ಪಟಾಕಿಗಳ ಮೇಲೆ ಸಂಪೂರ್ಣ ನಿಷೇಧ ಹೇರಿದೆ ಎಂದು ಸುಪ್ರೀಂ ಕೋರ್ಟ್ಗೆ ವಿಚಾರಣೆಯ ಸಂದರ್ಭ ತಿಳಿಸಲಾಯಿತು.
ದೆಹಲಿಯಲ್ಲಿ ಪಟಾಕಿ ನಿಷೇಧಿಸಿದ ನಿಯಮಗಳನ್ನೇ ಅನುಸರಿಸಿ ಉತ್ತರ ಪ್ರದೇಶ ಮತ್ತು ಹರಿಯಾಣಗಳಲ್ಲೂ ಪಟಾಕಿ ನಿಷೇಧಿಸಬೇಕೆಂದು ಎರಡೂ ರಾಜ್ಯ ಸರ್ಕಾರಗಳಿಗೆ ಸೂಚಿಸಿದ ನ್ಯಾಯಾಲಯ, ಮುಂದಿನ ವಿಚಾರಣೆಯನ್ನು ಜನವರಿ 15, 2025 ಕ್ಕೆ ಮುಂದೂಡಿತು.
ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆ (ಜಿಆರ್ಎಪಿ) -4 ಮಾನದಂಡಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ತಂಡಗಳನ್ನು ರಚಿಸುವಂತೆ ನ್ಯಾಯಾಲಯವು ದೆಹಲಿ ಮತ್ತು ಎನ್ಸಿಆರ್ ರಾಜ್ಯಗಳಿಗೆ ನಿರ್ದೇಶನ ನೀಡಿತು.
ಈ ಹಿಂದಿನ ವಿಚಾರಣೆಯಲ್ಲಿ ಪಟಾಕಿಗಳ ಬಳಕೆಯನ್ನು ಶಾಶ್ವತವಾಗಿ ನಿಷೇಧಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ದೆಹಲಿ ಮತ್ತು ಪಕ್ಕದ ರಾಜ್ಯಗಳ ಸರ್ಕಾರಗಳಿಗೆ ಸೂಚಿಸಿತ್ತು. ಪಟಾಕಿಗಳ ತಯಾರಿಕೆ, ಸಂಗ್ರಹಣೆ, ಮಾರಾಟ ಮತ್ತು ವಿತರಣೆ ಸೇರಿದಂತೆ ಎಲ್ಲಾ ವಿಚಾರಗಳ ಬಗ್ಗೆ ಅಗತ್ಯ ಮಾರ್ಗಸೂಚಿಗಳನ್ನು ಹೊರಡಿಸುವಂತೆ ಹೇಳಿತ್ತು.